ಹಿಂತಿರುಗಿದ. 'ಕಂಪಾರ್ಟ್‌ಮೆಂಟ'ನ ವಾತಾವರಣದಲ್ಲಿ ಸ್ವಲ್ಪ ಬದಲಾವಣೆಯಾಗಿತ್ತು. ಆತನು ಗಿರೀಶನೊಂದಿಗೆ ಅದೂ ಇದು ಮಾತನಾಡಲಾರಂಭಿಸಿ, ವಾಕ್ಚಿತ್ರಗಳ ವಿಚಾರ ತೆಗೆದನು, ತರುಣಿಯ ಮಧ್ಯೆ ಮಧ್ಯೆ ತನ್ನದೂ ಒಂದೊಂದು ಮಾತು ಹಾಕುತ್ತಿದ್ದಳು.
ಮಧ್ಯಾಹ್ನ ಒಂದೂವರೆ ಘಂಟೆಯವೇಳೆಗೆ ರೈಲು ಕಡಪಾಕ್ಕೆ ಬಂದು, ಆತನು 'ರೆಫ್ರೆಷ್‌ಮೆಂಟ್ ಕಾರಿ'ನ ಮಾಣಿಗೆ ಹೇಳಿ ಮೂರು ಮಂದಿಗೆ ಸಾಕಷ್ಟು ಊಟ ತರಲು ಹೇಳಿದ, ಗಿರೀಶನು 'ಇಲ್ಲ! ನನ್ನ ಯೋಚನೆ ನಿಮಗೆ ಬೇಡ. ನಾನೀಗ ಕೇವಲ ಕಾಫಿ ತಿಂಡಿ ಮಾತ್ರ ತೆಗೆದುಕೊಳ್ತೇನೆ. ಸಾಧಾರಣವಾಗಿ ನಾನು ರೈಲು ಪ್ರಯಾಣ ಮಾಡುವಾಗ ಊಟಮಾಡುವುದಿಲ್ಲ'ವೆಂದ. ತರುಣಿಯು, 'ಸಾಧಾರಣವಾಗಿ ತಾನೆ? ಈಗ ನಮ್ಮ ಜೊತೆಯಲ್ಲಿದ್ದೀರಿ; ನನ್ನೊಂದಿಗೆ ಊಟಮಾಡಿದರೆ ನಿಮಗೇನೂ ಅಜೀರ್ಣವಾಗದು' ಎಂದು ನಗುತ್ತ ನುಡಿದಳು. ಗಿರೀಶನು ಏನೋ ಹೇಳಬೇಕೆಂದು ಬಾಯ್ದೆಗೆದ, ಆದರೆ ಮನಸ್ಸಿಗೇನು ಹೊಳೆಯಿತೊ ಮರುಕ್ಷಣವೇ ಸುಮ್ಮನಾಗಿಬಿಟ್ಟ.
ಗೂಟಯಲ್ಲಿ ಗಿರೀಶನು ಕೆಳಗಿಳಿದು ಹೋದಾಗ, ಆತನೂ ಅವನನ್ನು ಹಿಂಬಾಲಿಸಿದ. ಪ್ಲಾಟ್‌ಫಾರಮ್ಮಿನ ಮೇಲೆ ಇಬ್ಬರೂ ನಡೆದಾಡುತ್ತಿದ್ದಾಗ, ಆತನು ಗಿರೀಶನ ಮುಖಭಾವವನ್ನೊಮ್ಮೆ ಪರೀಕ್ಷಿಸಿ 'ನಿಮ್ಮೊಂದಿಗೆ ಒಂದು ವಿಚಾರ ಹೇಳಬೇಕೆಂದಿದ್ದೇನೆ' ಎಂದ. ಗಿರೀಶನು ಆತನ ಕಡೆ ನೋಡಿ, ಮತ್ತೆ ತಲೆ ತಿರುಗಿಸಿಕೊಂಡು, 'ಏನು ಹೇಳಿ' ಎಂದ.
"ನೀವು ಮನಸ್ಸಿಗೇನು ತಿಳಿದುಕೊಂಡಿರೋ, ಆಕೆ………ನನ್ನ ತಂಗಿಯೂ ಅಲ್ಲ."
"ಅದು ನನಗೆ ಗೊತ್ತು."