ಪುಟ:27-Ghuntigalalli.pdf/೨೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೨೭ ಘಂಟೆಗಳಲ್ಲಿ
೧೭
 

"ನೀವೇನು ಮಾಡ್ತೀರಿ? ನೀವೇ ಏಕೆ ಕೊಡಬಾರದು?"

"ಅವಳು ಕಾಗದವನ್ನೋದಿ ಜೀರ್ಣಿಸಿಕೊಳ್ಳೋವರೆಗೆ ಬೇರೆ ಯಾವುದಾದರೂ ಕಂಪಾರ್ಟ್‌ಮೆಂಟಿನಲ್ಲಿ ಕುಳಿತಿದ್ದು, ಒಂದೆರಡು ಸ್ಟೇಷನ್ ಕಳೆದ ಮೇಲೆ ಬರ್ತೆನೆ. ನೀವು ಎದುರಿನಲ್ಲೇ ಇರುವಿರಾದ್ರಿಂದ ಗಲಾಟೆಗೇನೂ ಅವಕಾಶವಿರೋದಿಲ್ಲ."

"ನಿಮಗಿದರಲ್ಲಿ ಸಹಾಯಮಾಡೋಕೆ ನನಗೆ ಸ್ವಲ್ಪವೂ ಇಷ್ಟವಿಲ್ಲ. ಆದರೂ ಆಕೆ ಮುಖ ನೋಡಿ…… ಈ ಕಾಗದ ಅವಳ ಕೈಗೆ ಸಿಕ್ಕೋಹಾಗೆ ಮಾಡ್ತೀನೆ.”

"ಆ ಕಾಗದಾನ ನಾನು ತಲೆದಿಂಬಿನ ಕೆಳಗೆಲ್ಲಾದರೂ ಇಟ್ಟು ಬರಬಹುದಾಗಿತ್ತು. ಆದರೆ ಅವಳ ಕೈಗೆ ಅದು ನಾನು ಬೇರೆ ಜಾಗದಲ್ಲಿ ಕುಳಿತಿದ್ದಾಗ ಸಿಕ್ಕದೆಹೋದರೆ, ಅಥವಾ ಅವಳೊಂದಿಗೆ ನಾನಲ್ಲಿದ್ದಾಗಲೇ ಸಿಕ್ಕಿಬಿಟ್ಟರೆ ಫಜೀತಿಗಿಟ್ಟು ಕೊಳ್ಳುತ್ತೆ. ಆದ್ದರಿಂದ ನಿಮಗೆ ಈ ತೊಂದರೆ ಕೊಡಬೇಕಾಯಿತು. ಸ್ನೇಹಿತರಂತೆ ನಿಮ್ಮನ್ನ……”

"ನಾನ್ಯಾರ ಸ್ನೇಹಿತನೂ ಅಲ್ಲ; ಎಂದಿದ್ರೂ ನಿಮ್ಮಿಂದ ಆಕೆಗೆ ಕೇಡಿದ್ದೇ ಇದೆ. ಮುಂದೆ ಎಂದೋ ತಲೆಮೇಲೆ ಬೀಳೋಕಲ್ಲು ಈಗಲೇ ಬಿದ್ಹೋಗಲೀಂತ ಈ ಕಾಗದಾನ ಅವಳ ಕೈಗೆ ಕೊಡೋಕೆ ಒಪ್ಪಿ ಕೊಳ್ತೇನೆ" ಎಂದ.

"ಥ್ಯಾಂಕ್ಸ್" ಎಂದುಕೊಂಡು ಆತನು ತನ್ನ ಕಿಸೆಯಲ್ಲಿದ್ದ ಲಕೋಟೆಯೊಂದನ್ನು ಗಿರೀಶನ ಕೈಗಿತ್ತ. ಇಬ್ಬರೂ ' ಕಂಪಾರ್ಟ್ ಮೆಂಟ'ಗೆ ಹಿಂತಿರುಗಿದರು. ರೈಲು ಗುಂತಕಲ್ ಸ್ಟೇಷನ್ನಿನಲ್ಲಿ ಹೋಗಿ ನಿಂತಾಗ ಆತನು ಮತ್ತೆ ಗಾಡಿಯಿಂದಿಳಿದು ಹೋದ. ಆಗ ಸಂಜೆ ೫-೨೨ ಘಂಟೆಯಾಗಿತ್ತು. ಆತನು ಇತ್ತಿಂದತ್ತ ಸುತ್ತಾಡುತ್ತಿದ್ದುದನ್ನು ಗಿರೀಶನು ತಾನು ಕುಳಿತಿದ್ದ ಗಾಡಿಯ ಕಿಟಕಿಯಿಂದ ಕಂಡನು. ತರುಣಿಯು ಎದ್ದು, ಸಾಬೂನು, ಟವಲು, ಬಾಚಣಿಗೆ, ಕುಂಕುಮ

3