ಪುಟ:27-Ghuntigalalli.pdf/೨೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೧೮
ಬಿ. ಎಸ್. ವೆಂಕಟರಾಮನ್
 

ಇವುಗಳನ್ನು ಕೈಪೆಟ್ಟಿಗೆಯಿಂದ ತೆಗೆದುಕೊಂಡು 'ಬಾತ್‌ರೂಮ್'ಗೆ ಹೋಗಿ ಕದವಿಕ್ಕಿಕೊಂಡಳು, ಗಿರೀಶನ ಮನಸ್ಸಿಗದೇನು ಹೊಳೆಯಿತೋ, ಆತನು ಕೊಟ್ಟಿದ್ದ ಲಕ್ಕೋಟೆಯನ್ನು ಕಿಸೆಯಿಂದ ತೆಗೆದುಕೊಂಡು ಅದನ್ನೊಡೆದು ನೋಡಿದನು. ಒಳಗೆ ಕೆಲವು ೧೦ ರೂ.ಗಳ ನೋಟುಗಳೂ ಮೂರು ೧೦೦ ರೂ. ಗಳ ನೋಟುಗಳೂ, ಒಂದು ಕಾಗದವೂ ಇತ್ತು. ಗಿರೀಶನಿಗೆ ಇದು ಸಂದೇಹವನ್ನುಂಟುಮಾಡಲು ಕಾಗದವನ್ನು ಬಿಚ್ಚಿ ನೋಡಿದ. ತರುಣಿಯ ಹೆಸರು ಶಶಿಯೆಂದೂ, ಆತನ ಹೆಸರು ದೇವರತ್ನನೆಂದೂ ವ್ಯಕ್ತಪಟ್ಟಿತು. ಶಶಿಯು ತನ್ನ ಆಸೆಯನ್ನು ಇನ್ನು ಮುಂದೆ ಇಟ್ಟುಕೊಳ್ಳಬಾರದೆಂದೂ, ಅವಳ ಸಹವಾಸದಿಂದ ತಾನು ತೀರ ಬೇಸರಗೊಂಡಿರುವುದರಿಂದ ತಾನು ಅವಳನ್ನು ಬಿಟ್ಟು ಹೋಗುತ್ತಿರುವುದಾಗಿಯೂ ತನ್ನಿ೦ದ ಅನರ್ಧವೇ ನಾದರೂ ಆಗಿದ್ದಲ್ಲಿ ಅದಕ್ಕೆ ಅವಳು ಕಾಗದದೊಂದಿಗಿದ್ದ ಹಣವನ್ನು ಪರಿಹಾರವಾಗಿ ತೆಗೆದುಕೊಳ್ಳಬೇಕೆಂದೂ, ತಾನು ಬೇರೆ ಯಾರನ್ನೂ ಮದುವೆಯಾಗಲೊಪ್ಪಿಗೆಯನ್ನಿತ್ತಿರುವುದಾಗಿಯೂ ಆ ಕಾಗದದಲ್ಲಿ ದೇವರತ್ನನು ತಿಳಿಸಿದ್ದನು.

ಗಿರೀಶನು ಕಾಗದವನ್ನು ಮಡಿಸಿ, ಒಂದು ನಿಮಿಷ ಯೋಚಿಸುತ್ತ ಕುಳಿತ. ಅನಂತರ ತನ್ನ "ಲೆಟರ್ ಕೇಸಿ"ನಿಂದ ಬೇರೊಂದು ಲಕೊಟೆಯನ್ನು ತೆಗೆದು ಆ ಕಾಗದವನ್ನು ಮತ್ತು ಎರಡು ೧೦ ರೂ. ಗಳ ನೋಟುಗಳನ್ನೂ ಅದರೊಳಗಿಟ್ಟು ಅಂಟಿಸಿ, ಉಳಿದ ನೋಟುಗಳನ್ನು ತನ್ನ ಕಿಸೆಯೊಳಗಿಟ್ಟುಕೊಂಡ. ಶಶಿಯು ಇನ್ನೂ 'ಬಾತ್‌ರೂಮಿ'ನಿಂದ ಹೊರಕ್ಕೆ ಬಂದಿರಲಿಲ್ಲ. ಮತ್ತೊಂದು ಕ್ಷಣ ಯೋಚಿಸಿ ತಾನು ಅಂಟಿಸಿದ್ದ ಲಕ್ಕೋಟೆಯನ್ನು ಶಶಿಯು ಕುಳಿತಿದ್ದ ಬರ್ತಿನ ಕೆಳಗೆ ಹಾಕಿದ. ಒಂದುವೇಳೆ ಆವಳೇನಾದರೂ ತನ್ನ ದೊಡ್ಡ ಪೆಟ್ಟಿಗೆಯನ್ನು ತೆಗೆಯಲಿಚ್ಚಿಸಿದರೆ ಆಗ ಅದು ಅವಳ ಕಣ್ಣಿಗೆ ಬೀಳುವುದೆಂದೂ, ತೆಗೆದುಕೊಂಡು ನೋಡಿಕೊಳ್ಳುವಳೆಂದೂ ಭಾವಿಸಿ,