ಪುಟ:27-Ghuntigalalli.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೪

ಬಿ. ಎಸ್. ವೆಂಕಟರಾಮನ್

ಮಾಡಿಕೊಂಡು ಶಶಿಯ ಮೇಲೊಂದು ಕಾವಲಿನ ಕಣ್ಣಿಟ್ಟು ಕಾಲ ಕಳೆಯಲಾರಂಭಿಸಿದನು. ಅವನ ಮನಸ್ಸಿನಲ್ಲಿ 'ಇದೆಲ್ಲಿಯ ಗ್ರಹಚಾರ ಗಂಟುಬಿತ್ತಾ ನನಗೆ' ಅನ್ನಿಸಿತು.

ರೈಲು ವಾಡಿ, ಷಹಾಬಾದ್ ಸ್ಟೇಷನ್ನುಗಳನ್ನು ದಾಟಿತು. ಸುಮಾರು ೧೧ ಘಂಟೆಯವರೆಗೂ ಶಿಲಾಪ್ರತಿಮೆಯಂತೆ ಕುಳಿತಿದ್ದ ಶಶಿಯು ಸ್ವಲ್ಪ ತನ್ನ ಸ್ಥಾನದಿಂದ ಕದಲಿದಳು. ಅದುವರೆಗೂ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ ಗಿರೀಶನಿಗೆ ಆಗತಾನೇ ನಿದ್ದೆಯ ರೋಂಪು ಹತ್ತಿತ್ತು. ಕಣ್ಣಿಗೆ ವಿಪರೀತ ಶ್ರಮವಾಗಿದ್ದುದರಿಂದ ರೆಪ್ಪೆಗಳು ಏಕಾಏಕಿ ತಮ್ಮ ಕರ್ತವ್ಯ ಪಾಲನೆಮಾಡಲು ನಿರಾಕರಿಸುತಿದ್ದವು. ಅವನ ಮನಸ್ಸು ಪೂರ್ಣವಾಗಿ ಅವನನ್ನು ಬಡಿದೆಬ್ಬಿಸಿತು. ಕಣ್ಣು ರೆಪ್ಪೆಗಳು ಮುಚ್ಚಿಕೊಂಡಿದ್ದರೂ 'ಕಂಪಾರ್ಟ್‌ಮೆಂಟಿ'ನೊಳಗೆ ಬೆಳಕಿದೆಯೆಂಬ ಅನುಭವವು ಅವನಿಗಾಯಿತು. ಬಲಾತ್ಕಾರವಾಗಿ ಕಣ್ಣು ರೆಪ್ಪೆಯನ್ನು ತೆರೆದು ನೋಡಿದ. ಅವನ ಭಾವನೆಯು ತಪ್ಪಾಗಿರಲಿಲ್ಲ. ದೀಪ ಹಚ್ಚಲ್ಪಟ್ಟಿತ್ತು. ಮುಸುಕನ್ನು ಸ್ವಲ್ಪಮಟ್ಟಿಗೆ ಓರೆಮಾಡಿಕೊಂಡು ನೋಡಿದನು. ಎದುರಿಗೆ ಶಶಿಯು ಕುಳಿತಿದ್ದ ಜಾಗ ಖಾಲಿಯಾಗಿತ್ತು. ಅವನ ಎದೆ ಧಸಕ್ಕೆಂದಿತು, 'ಏನೊ ಅನಿಷ್ಟದ ಸೂಚನೆಯೇ ಅದೆ'೦ದು ಅವನು ಭಾವಿಸಿದ. ಅವನ ತಲೆಯ ಕಡೆ ಸ್ವಲ್ಪ ಸದ್ದಾಯಿತು. ಅದನ್ನು ಕೇಳಿದ ಕೂಡಲೇ 'ಸದ್ಯ, ಇನ್ನೂ ಏನೂ ಆಗಿಲ್ಲ'ವೆಂದುಕೊಂಡು ಒಂದು ಸಮಾಧಾನಕರವಾದ ನಿಟ್ಟುಸಿರು ಬಿಟ್ಟ. ಶಶಿಯು ತನ್ನ ಜಾಗದಿಂದ ಕದಲುವ ಮುಂಚೆ ಒಂದು ನಿರ್ಧಾರಕ್ಕೆ ಬಂದಿದ್ದಳು. ನಿರ್ಧಾರವಾದೊಡನೆಯೇ ಅದನ್ನು ಆಚರಣೆಯಲ್ಲಿ ತರುವ ಉದ್ದೇಶದಿಂದ ಎದ್ದಳು. ರೈಲು ಅತಿವೇಗದಿಂದ ಮು೦ದೆ ಸಾಗುತ್ತಿತ್ತು. ' 'ಕಂಪಾರ್ಟ್‌ಮೆಂಟನ' ಬಾಗಿಲನ್ನು ತೆಗೆಯಲು ಪ್ರಯತ್ನಿಸಿದಳು. ಸಾಧ್ಯವಾಗಲಿಲ್ಲ. ಕಾರಣವನ್ನು ಕಂಡು