ಪುಟ:27-Ghuntigalalli.pdf/೨೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೨೬
ಬಿ. ಎಸ್. ವೆಂಕಟರಾಮನ್
 

ದ್ರೋಹಮಾಡಿದ್ದು? ನಮ್ಮ ದೇಶದಲ್ಲಿ ೩೫೦ ಕೋಟಿ ಜನರಿದ್ದಾರೆ. ಅವರನ್ನೆಲ್ಲಾ ಬಿಟ್ಟು ನನ್ನನ್ನೇ ಹುಡುಕಬೇಕೆ ನೀನು, ನಿನ್ನ ಬುದ್ದಿ ಗೇಡಿತನಕ್ಕೆ ದಂಡ ತೆರೋಕೆ. ಹಾಗೆ ಸಾಯಬೇಕೂಂತನ್ನೋ ಇಷ್ಟವಿದ್ದರೆ ಬೇರೆ ಇನ್ಯಾವ 'ಕಂಪಾರ್ಟ್‌ಮೆಂಟ'ಗಾದರೂ ಹೋಗಿ ನಾಲ್ಕು ಸ್ಟೇರ್ಷ ಕಳೆಯೋವರೆಗೆ ಕೂತಿದ್ದು ಆಮೇಲೆ ಹೊರಕ್ಕೆ ಹಾರಿಕೊಂಡು ಸತ್ತಿದ್ದರೆ ಯಾರು ಬೇಡಾಂತಿದ್ದರು? ಎಲ್ಲಾ ಬಿಟ್ಟು ನನ್ನ 'ಕಂಪಾರ್ಟ್‌ಮೆಂಟೇ' ಆಗಬೇಕಾಗಿತ್ತೇನು ನಿನ್ನ ಈ ಅವಸಾನ ನಾಟಕದ ಕೊನೇ ಅಂಕಕ್ಕೆ?” ಎಂದು ಗರ್ಜಿಸಿದ. ಶಶಿಗೆ ಕೋಪ ವಿನ್ನೂ ಹೆಚ್ಚಿತು.

"ನಿಮ್ಮನ್ಯಾರು ಬಾ ಅಂದ್ರು ಈ 'ಕಂಪಾರ್ಟ್‌ಮೆಂಟ'ಗೆ? ಗಾಡಿಯಿಂದ ಹೊರಕ್ಕೆ ಹಾರಿಕೊಳ್ಳಬೇಕೂಂತ ಮನಸ್ಸು ಬಂದರೆ ಹಾರಿಕೊಳೇನೆ, ನಿವ್ಯಾರು ತಡೆಯೋಕೆ?" ಎಂದು ಎದ್ದು ಮತ್ತೊಮ್ಮೆ ಬಾಗಿಲಕಡೆ ಹೊರಟಳು. ಅವಳ ಮುಖದಲ್ಲಿ ಆಗ ನಿಜವಾಗಿಯೂ ಚಂಡಿಯ ರೌದ್ರಾವೇಶವು ಎದ್ದು ಕಾಣುತ್ತಿತ್ತು. ಗಿರೀಶನು ಎಂದೂ ಹೆಂಗಸರ ಮೈ ಮೇಲೆ ಕೈ ಹಾಕಿದವನಲ್ಲ. ಇಂದು ಅವನ ಹಣೇಬರಹಕ್ಕೆ ಎರಡನೆಯಬಾರಿ ಅವನು ಹಾಗೆ ಮಾಡಬೇಕಾಗಿ ಬಂದಿತು. ಅವನ ಸ್ಥೈರ್ಯವೆಲ್ಲಾ ಗಾಳಿಗೆ ತೂರಿ ಹೋಗಿತ್ತು. ಈ ಹೆಣ್ಣು ನಿಜವಾಗಿಯೂ ತಾನು ಹೇಳಿದಂತೆ ಮಾಡಿಯೇಬಿಡುವ ಜಾತಿಯವಳೆಂದು ಅವನ ಮನಸ್ಸಿಗೆ ಖಂಡಿತವಾದ ಮೇಲಂತೂ ಅವನ ಎದೆ ಡವಡವನೆ ಹೊಡೆದುಕೊಳ್ಳಲಾರಂಭಿಸಿತು. ನಡುಗಿ, ಶಶಿಯನ್ನು ಮತ್ತೊಮ್ಮೆ ಒರಟಾಗಿ ಹಿಡಿದೆಳೆದು ಅವಳ ಹಾಸಿಗೆಯಮೇಲೆ ದೂಡಿದನು. ಅವಳಿಗದರಿಂದ ನೋವೂ, ಅವನ ಬಗ್ಗೆ ಕ್ರೋಧಾಸಹ್ಯಗಳೂ ಇಮ್ಮಡಿಯಾಗಿ ಉಂಟಾಯಿತು, ಅವನ ಮೇಲೆ ಬೈಗಳ ಮಳೆ ಕರೆದು,

"ಯು ಆರ್ ಎ ಬ್ಯೂಟ್" ಎಂದಳು. ಗಿರೀಶನು, 'ಥ್ಯಾಂಕ್ಸ್ ಫಾರ್ ದಿ ಕಾಂಪ್ಲಿಮೆಂಟ್' ಎಂದ.