ಪುಟ:27-Ghuntigalalli.pdf/೩೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಬಿ. ಎಸ್. ವೆಂಕಟರಾಮ್

ಪೊಲೀಸಿನವರೂ, ಗಾರ್ಡೂ ಆಗಿನಿಂದಲೇ ನಮ್ಮಿಬ್ಬರಿಗೂ ಸಂಬಂಧ ಕಲ್ಪಿಸಿರಬಹುದು. ಅದೂ ನಾವು ಸೆಕೆಂಡ್ ಕ್ಲಾಸ್ ಕಂಪಾರ್ಟ್‌ಮೆಂಟ ನಲ್ಲಿರೋದರಿಂದ ಇನ್ನಷ್ಟು ಅವರ ಕಣ್ಣಿಗೆ ಹೆಚ್ಚಾಗೇ ಬಿದ್ದಿರ್ತೀವಿ. ನಾಳೆ ನಿನ್ನ ಹೆಣ ಅವರ ಕಣ್ಣಿಗೆ ಬೀಳುತ್ತಲೆ ಪ್ರತಿಯೊ೦ದು ಸ್ಟೇಷನ್ನಿಗೂ ಸುದ್ದಿ ಹೋಗಿಬಿಟ್ಟಿರುತ್ತೆ. ಮಧ್ಯದ ಸ್ಟೇಷನ್ನುಗಳಲ್ಲೇ ರೈಲ್ವೆ ಪೋಲೀಸಿನವರು ತಮ್ಮ ಅನುಮಾನ ಪರಿಹಾರ ಮಾಡ್ಕೊಂಡು ನಾನೇ ನಿನ್ನ ಒಡವೆ ವಸ್ತು ಆಸೆಗೋ ಇಲ್ಲಾ ಇನ್ಯಾವುದಾದ್ರೂ ಕಾರಣದಿಂದ್ಲೊ ಖೂಸಿ ಮಾಡಿದ್ದೇನೇಂತ ಗುಮಾನಿ ಮೇಲೆ ನನ್ನ ಹಿಡ್ಕೊಂಡ್ಹೋಗ್ತಾರೆ. ಸರಿ ! ಆಮೇಲೆ ನನಿಗೆ ಗಲ್ಲೇ ಗತಿ, ನಿನಗೇನು ನಿಶ್ಚಿಂತೆಯಾಗಿ ಸತ್ತು ಸ್ವರ್ಗ ಸೇರಿಬಿಡ್ತಿ.'

“ ಹೌದು ! ನೀವೇನೂ ನನ್ನ ಕೊಲೆಮಾಡೊಲ್ಲವಲ್ಲ ; ನಾನಾಗಿ ತಾನೇ ಸಾಯ್ತೀನಿ ?”

"ಹೌದೂ ! ಆದರೆ ಆ ಮಾತು ಪೋಲೀಸಿನೋರಿಗೆ ಮಂದಟ್ಟು ಮಾಡಿಸೋಕೆ ನೀನು ಬದುಕಿರೊಲ್ಲವಲ್ಲ ? ' ಸನ್ನಿವೇಶಕ ಸಾಕ್ಷ್ಯ'ಗಳ ಜೋಮಾಲೆ ನನ್ನ ಕುತ್ತಿಗ್ಗೆ ಹಾಕಿ ನನ್ನ ಗಲ್ಲಿಗೇರಿಸೋವರ್ಗೂ ಪೋಲೀಸಿನವರಿಗೆ ನನ್ನ ಮೇಲೆ ದಾಯಾದಿ ಮಾತ್ಸರ್ಯವಿರುತ್ತೆ. ನನಗೆ ಬೆಂಬಲ ಕೊಡೋಕೆ ನನಗ್ಯಾರೂ ಶ್ರೀಮಂತ ಬಂಧುಗಳಿಲ್ಲ ; ಗೊತ್ತಾ ಯಿತೆ ? ಕಷ್ಟ ಪಟ್ಟು ನಾನೂ ಏನೋ ಒಬ್ಬ ಮನುಷ್ಯಾಂತ ಆಗಿದ್ದೇನೆ; ನನ್ನ ಪ್ರೇತವಾಗಿ ಮಾಡೋಕೆ ನೀನೊಬ್ಬಳು ಹುಟ್ಟಿ ಕೊಂಡೆ.ಈ ಹಾಳು ಗಾಡಿಗೆ ಹತ್ತಿದ ಘಳಿಗೇನ ಶಪಿಸೋದೋ, ಇಲ್ಲಾ ನಿನ್ನ ಶಪಿಸೋದೋ ನನಗ್ಯಾವುದೂ ತೋಚೊಲ್ಲ”

ಶಶಿಯ ಮುಖಭಾವ ಬದಲಾಯಿತು.'ನಾನದನ್ನು ಯೋಚಿಸಿಯೇ ಇರಲಿಲ್ಲ ” ಎಂದಳು.

“ ನಿನಗಂತಹ ಯೋಚನೆಯೂ ಹೊಳೆಯೋದೇ ಇಲ್ಲಾನ್ನೋದು ಖಂಡಿತ. ಹಾಗೆ ಮುಂದಾಲೋಚನೆ ನಿನಗೆ ಇದ್ದಿದ್ರೆ ಹೀಗೆ ಒಂದು ದಿನ ಪ್ರಾಣಾ ಕಳಕೊಳ್ಳೋ ಸಂದರ್ಭ ಬರುತ್ಲೇ ಇರಲಿಲ್ಲ.”