ಇಲ್ಲ ; ನೀನ್ಯಾರೋ ನಾನ್ಯಾರೋ ಹುಟ್ಟಿದಾಗಿನಿಂದ ಕಾಣದೇ ಇದ್ದ ಒಬ್ಬ ಹೆಂಗಸಿಗೋಸ್ಕರ ನಾನ್ಯಾಕೆ ನನ್ನ ತಲೇಮೇಲೆ ಇಲ್ಲದ ಭಾರಾ ಹೊತ್ಕೋಬೇಕೂಂತ ಯೋಚ್ನೆ ಮಾಡ್ತಿದ್ದೇನೆ” ಎಂದ ಗಿರೀಶ,
"ಕೊನೇಗೇನು ನಿರ್ಧಾರಕ್ಕೆ ಬಂದಿರಿ?”
"ಇಷ್ಟೆ. ಪ್ರಪಂಚದಲ್ಲಿ ನಿನ್ನ ಹಾಗೆ ಕೋಟ್ಯಾಂತರ ಹೆಂಗುಸರು ಕಷ್ಟಕ್ಕೆ ಸಿಕ್ಕಿಕೊಂಡಿರ್ತಾರೆ. ಅವರಿಗೆಲ್ಲ ಯಾರು ಸಹಾಯಮಾಡಿ ದ್ದಾರೆ? ಒಂದೇ ರೈಲಿನಲ್ಲಿ ಪ್ರಯಾಣಮಾಡೋರು ಊರುತಲಪುತ್ತಲೇ ಒಬ್ಬರಿಂದೊಬ್ಬರು ಬೀಳ್ಕೊಳ್ಳೋದು ಕೂಡ ಇಲ್ಲದೆ ತಂತಮ್ಮ ದಾರಿ ಹಿಡಿದು ಹೋಗೊಲ್ವೆ ? ಹಾಗೇನೇ ನೀನೂ ನಾನೂ ರೈಲಿನಲ್ಲಿ ಭೇಟಿ ಯಾದೆವು ; ಯಾಕೆ ನಾವೂ ಉಳಿದೋರ ಹಾಗೆ ನಂನಮ್ಮ ದಾರಿ ಹಿಡಿದು ಹೋಗಬಾರದೂಂತ ನನಗನ್ನಿಸ್ತಿದೆ.”
"ನೀವಿಷ್ಟು ಹೇಡಿಗಳೂಂತ ನಾನು ಭಾವಿಸಿರಲಿಲ್ಲ. ಹೋಗಲಿ! ನನ್ನಿಂದ ನಿನಗ್ಯಾಕಿಷ್ಟು ತೊಂದರೆ ; ನನ್ನ ಸ್ವಸ್ಥವಾಗಿ ಯಾವುದಾದ ರೊಂದು ಆಶ್ರಮಕ್ಕೆ ಸೇರಿಸಿಟ್ಟು ಹೋದರೆ ಸಾಕು, ಇಲ್ಲಾ ಅದೂ ಕಷ್ಟವಾದರೆ ಬೇಡ, ನನ್ನ ಪಾಡು ಹೇಗಾದರೂ ಆಗುತ್ತೆ ಬಿಡಿ.”
" ಸರಿ, ಹಾಗಾದ್ರೆ ! ಬೊಂಬಾಯಿ ತಲಪುತ್ತಲೇ ನಿನ್ನನ್ನ ಯಾವುದಾದೊಂದು ಆಶ್ರಮಕ್ಕೆ ಕರೆದುಕೊಂಡು ಸೇರಿಸಿಬಿಟ್ಟು ನನ್ನ ದಾರಿ ಹಿಡೀತೇನೆ.”
“ಬಹಳ ಸಂತೋಷ, ಅಷ್ಟಾದರೂ ಮಾಡ್ತೀನೀಂತ ಹೇಳಿದಿ ರಲ್ಲಾ.” ಎಂದು ನುಡಿದು ಶಶಿಯು ಖಿನ್ನ ಮನಸ್ಕಳಾದಳು. ಕಲ್ಯಾಣ್, ದಾದರ್ ಸ್ಟೇಷನ್ನುಗಳು ಕಳೆದು ಬೊಂಬಾಯಿಯ ವಿಕ್ಟೋರಿಯಾ ಟರ್ಮಿನಸ್ಸಿಗೆ ಹತ್ತೂಕಾಲು ಘಂಟೆಗೆ ಸರಿಯಾಗಿ ಗಾಡಿ ಬಂದಿತು, ಕೂಲಿಗಳು ಬಂದು ಮುತ್ತಿದರು.