ಪಟ್ಟಿತ್ತು. ರಾಜಿಯು ಅವನ ತಲೆಯಬಳಿ ಮೌನವಾಗಿ ಕುಳಿತು
ಅವನ ಹಣೆಯಮೇಲೆ ತಣ್ಣೀರಿನ ಬಟ್ಟೆ ಒತ್ತುತ್ತಿದ್ದಳು.
XXXX
ಮೂರ್ತಿಯು ಹಿಂದಿರುಗುವ ಸಂತೋಷದಲ್ಲಿ ಅವನ ತಂದೆ
ತಾಯಿಗಳು ಏರ್ಪಡಿಸಿದ್ದ ಔತಣದೂಟಕ್ಕೆ ಆಹ್ವಾನಿಸಲ್ಪಟ್ಟಿದ್ದ
ಬಂಧುಗಳ ಪೈಕಿ ಕೆಲವರು ಸಮರ ಭೂಮಿಯ ವಿಚಾರ ವೈಖರಿಯನ್ನು
ಕೇಳಿ ತಿಳಿದುಕೊಳ್ಳುವ ಕುತೂಹಲದಿಂದ ಬಂದಿದ್ದರು. ಕೆಲವರು
ವಿದೇಶೀಯ ಮಹಿಳಾ ರಂಗಗಳಲ್ಲಿ ಸೈನಿಕರ ಸ್ವೇಚ್ಚಾವರ್ತನೆಗಳ
ಸ್ವಾರಸ್ಯ ಕತೆಗಳನ್ನು ಕೇಳಿ ಪುಲಕಿತರಾಗುವ ಎಳೆಮನಸ್ಸಿನಿಂದ
ಬಂದಿದ್ದರು. ಮತ್ತೆ ಕೆಲವರು, ಮೂರ್ತಿಯು ಪರದೇಶದಲ್ಲಿ ತನ್ನ
ವಿರಾಮಕಾಲವನ್ನು ಯಾವ ಬಗೆಯ ವಿಳಾಸಕೇಳಿಗಳಲ್ಲಿ ಕಳೆದ
ನೆಂಬುದರ ರಹಸ್ಯವನ್ನು ಭೇದಿಸಲು ಬದ್ಧ ಕಂಕಣರಾಗಿ ಬಂದಿದ್ದರು.
ಮತ್ತೆ ಕೆಲವರು ಕೇವಲ ಮೃಷ್ಟಾನ್ನ ಭೋಜನ ಪಡೆಯುವ ಉತ್ಸು
ಕತೆಯಿಂದಲೇ ಬಂದಿದ್ದರು. ಅಂತೂ ಎಲ್ಲರೂ, ಊಟಮಾಡುವ
ಆಸೆಯನ್ನೆ ಇಟ್ಟುಕೊಂಡಿದ್ದರೂ, ಮೂರ್ತಿಯ ಕಣ್ಣು, ಕಾಲು
ಕಳೆದುಹೋದ ಬಗ್ಗೆ ಕನಿಷ್ಟ ಪಕ್ಷ ನಾಲ್ಕಾದರೂ ಕನಿಕರದ ಮಾತನ್ನಾಡಿ,
ಅವನು ಆ ಅಂಗಗಳನ್ನು ಹೇಗೆ ಕಳೆದುಕೊಂಡನೆಂಬ ಕತೆಯನ್ನು
ಕೇಳದೆ ಹೋದರೆ ' ಊಟಕ್ಕಾಗಿಯೇ ಬಂದ ಕಟುಕರೆಂಬ ಕೀರ್ತಿಗೆಲ್ಲಿ
ಪಾತ್ರರಾಗುವೆವೋ ಎಂಬ ಸಾಂಪ್ರದಾಯಿಕ ಭೀತಿಯಿಂದ ಪ್ರತಿ
ಯೊಬ್ಬರೂ ಮೂರ್ತಿಯ ಕೋಣೆಯ ಬಾಗಿಲಿನಲ್ಲಿ ತಲೆಹಾಕಿ, ತಮ್ಮ
ಗಿಣಿಪಾಠವೊಪ್ಪಿಸಿ, ತಲೆಯಲ್ಲಾಡಿಸಿ, ಲೊಚಗುಟ್ಟುತ್ತ ಊಟದ
ಕೋಣೆಗೆ ಕಾಲು ಹಾಕುತ್ತಿದ್ದರು,
ಊಟವೆಲ್ಲಾ ಸಾಂಗೋಪಾಂಗವಾಗಿ ಜರುಗುವವರೆಗೆ ಅವರ
ಚರ್ಚೆಗೆ, ಅಭಿಪ್ರಾಯ ಪ್ರಕಟಣೆಗೆ ಸಿಕ್ಕಿದ್ದ ವಿಚಾರವೆಲ್ಲ ಸಂಗ್ರಾಮದ
ಸತ್ಯಾಸತ್ಯ ಸುದ್ದಿಗಳು ; ಸಹಸ್ರಾರು ಮಂದಿಯ ಸಾವು-ನೋವುಗಳು ;