ತೊಡಕಿನ ಬಾಳು
ಒಂದು ದಿನ ನಮ್ಮೂರಿನಿಂದ ಬಂದಿದ್ದವರೊಂದಿಗೆ ಹುಚ್ಚಾ ಸ್ಪತ್ರೆಗೆ ಹೋಗಿ ಬರಬೇಕಾಯ್ತು, ಅಲ್ಲಿದ್ದ ಅನೇಕ ಬಗೆಯ ಜನರನ್ನೂ, ಅವರ ವಿಚಿತ್ರ ನಡೆ-ನುಡಿಗಳನ್ನೂ ನೋಡಿ 'ನಮ್ಮಲ್ಲಿ ಯಾರು ಹುಚ್ಚರು | ನಾವೋ ಅವರೋ?' ಎಂಬ ಪ್ರಶ್ನೆಯೊಂದು ನನ್ನ ಮನಸ್ಸಿನಲ್ಲಿ ಹುಟ್ಟಿದುದು ಇನ್ನೂ ಅದು ಪ್ರಶ್ನೆಯಾಗಿಯೇ ಉಳಿದಿದೆ. ಕಾರಣ, ಪ್ರಪಂಚದ ಅರ್ಧ ಜನರೆಲ್ಲಾ ಉಳಿದರ್ಧವನ್ನು ಹುಚ್ಚರೆಂದು ಭಾವಿಸುವುದು, ಹೀಗೆ ಯೋಚಿಸುತ್ತ ಹೋದರೆ ನಮ್ಮ ಬಾಳುವೆಯೇ ಬಹಳ ತೊಡಕಿನದೆಂದು ಭಾಸವಾಗುತ್ತದೆ. ಆಗ ನಾನೇನೋ ಯೋಚನೆಯಲ್ಲಿ ಮೈಮರೆಯುವಷ್ಟರಲ್ಲೇ ಒಬ್ಬ ಯುವಕನು ನನ್ನನ್ನು ದ್ದೇಶಿಸಿ “ಸ್ವಾಮಿ........?” ಎಂದ. ಆತನ ಕಡೆ ತಿರುಗಿ "ಏನು?” ಎಂದೆ. “ನನ್ನ ಚೆನ್ನಾಗಿ ನೋಡಿ ಹೇಳಿ ಸ್ವಾಮಿ, ನಾನು ಹುಚ್ಚನ ಹಾಗೆ ಕಾಣಿಸುತ್ತೇನೆಯೇ?” ಎಂದ ಆತ. ಆತನು ಹಾಗೆ ಕೇಳದಿದ್ದರೆ ನಾನಾತನನ್ನು ಖಂಡಿತವಾಗಿಯೂ ಹುಚ್ಚನೆಂದು ಹೇಳುತ್ತಿರಲಿಲ್ಲ. ಆದರೂ ಆತನು ಹಾಗೆ ಕೇಳಿದಮೇಲೆ ಖಚಿತವಾಗಿ ಹೇಳಲಾರದಾದೆ. ಒಂದು ಬಾರಿ ಆತನ ತೀಕ್ಷ್ಯ ದೃಷ್ಟಿಯು ನನ್ನನ್ನು ಅಧೀರನನ್ನಾಗಿ ಮಾಡಿತು. ಕ್ಷಣಕಾಲ ಸುಮ್ಮನಿದ್ದು ಅನಂತರ “ಇಲ್ಲ, ನನಗೆ ನೀವು ಹುಚ್ಚರೆಂದು ತೋರುವುದಿಲ್ಲ"ವೆಂದು ಹೇಳಿದೆ. ಅದನ್ನು ಕೇಳಿದ ಆತನ ಮುಖವು ಆನಂದದಿಂದರಳಿತು. ನಾನೂ ಅದೇ ಸಮಯವೆಂದು ಕದಲಲೆತ್ನಿಸಿದೆ. ಆದರೆ ಆತನು ನನ್ನನ್ನು ಹೋಗಗೊಡದೆ "ಸ್ವಾಮೀ, ಆ ಮಾತನ್ನು ಹೇಳಿದವರಲ್ಲಿ ನೀವೊಬ್ಬರು ಮಾತ್ರವೇ ಅನುಮಾನಿಸಿ ನುಡಿದವರು. ನನ್ನ ಕಥೆಯನ್ನು ಕೇಳಿ, ನಿಮ್ಮ ಅನುಮಾನವು ಪರಿಹಾರವಾಗಿ ನಿಮ್ಮ ಹೇಳಿಕೆಯು ಸತ್ಯವೆಂದು ನಿಮಗೇ ತಿಳಿದು ಬಂದರೆ ನನಗೊಂದುಪಕಾರ ಮಾಡುವಿರಾ?” ಎಂದ. ನಿರ್ವಾಹವಿಲ್ಲದೆ ನಾನು ಆಗಲೆಂದೊಪ್ಪಿಕೊಂಡೆ. 12