ಸಂವೇದನಾ ಜೀವಿಗಳಿಗಂತೂ ಭ್ರಮೆನಿರಸನವೇ ಆಗಿದೆ ಎನ್ನಬೇಕು. ಇಂತಹ ಅನುಭವದಿಂದ ಮನಸ್ಸು ಕಹಿಯಾಗುತ್ತದೆ; ಭಾವನೆಗಳು ಒರಟಾಗುತ್ತವೆ. ಶಂಕೆ ಸಂದೇಹಗಳು ಅವರೆದುರು ದಟ್ಟೈಸಿದ ಕಾರ್ಮೊಡಗಳಾಗುತ್ತವೆ. ಕಪ್ಪು ಇಬ್ಬನಿಯ ಪರದೆಯಾಚೆ ಇನ್ನೊಂದು ಜಗತ್ತನ್ನು ಕಾಣಲು ಅವರು ಅಸಮರ್ಥರಾಗುತ್ತಾರೆ. ಅಂಥದೊಂದು ಜಗತ್ತಿದೆ ಎಂದು ನಂಬಲು ಅವರು ನಿರಾಕರಿಸುತ್ತಾರೆ.
ಈ ಬಗೆಯ ಮನೋವೃತ್ತಿ ಬಲಗೊಂಡು ಸರ್ವವ್ಯಾಪಿಯಾದರೆ ಮುಂದೆ ಏನಾಗಬಹುದು? ಇತಿಹಾಸ ಕಲಿಸುವ ಪಾಠವನ್ನು ಗಮನಿಸದೆ, ಛಿದ್ರ ಪ್ರವೃತ್ತಿಗಳ ವಿಕಟ ನರ್ತನವನ್ನು ತಡೆಯಲೆತ್ನಿಸದೆ, “ನಾನು ಮಾಡು ವಂಥದೇನೂ ಇಲ್ಲ” ಎಂದು ಪ್ರತಿಯೊಬ್ಬನೂ ನಿಷ್ಕ್ರಿಯನಾದರೆ ಈ ದೇಶದಲ್ಲಿ ಏನು ಸಂಭವಿಸಬಹುದು ?
ಆ ಚಿತ್ರ ಕಲ್ಪನೆಗೆ ನಿಲುಕದ್ದಲ್ಲ.
__ಜಾತಿ ಮತಗಳ ತಿಕ್ಕಾಟ ಮುಂದುವರಿದರೆ ರಕ್ತದ ಕಾಲುವೆಗಳು ಹರಿಯುವುವು.
__ಯುವ ಜನಾಂಗದಲ್ಲಿ ಕಂಡುಬರುವ ಅಶಾಂತಿ, ಅಶಿಸ್ತು ಪ್ರಕ್ಷುಬ್ಧ ಪರಿಸ್ಥಿತಿಯನ್ನು ಉಂಟುಮಾಡುವುವು.
__ಭಾಷೆಯ ಮೇಲಣ ಅಂಧ ಪ್ರೇಮದಿಂದ ರಾಜ್ಯರಾಜ್ಯಗಳ ನಡುವೆ ಘರ್ಷಣೆಗಳಾಗುವುವು.
__ನೀರಿನ ವ್ಯಾಜ್ಯ ಜಲಾಶಯಗಳ ನಾಶದಲ್ಲಿ ಪರ್ಯವಸಾನವಾಗುವುದು.
__ 'ದಕ್ಷಿಣಸ್ಥಾನ' ಬೇಕೆನ್ನುವ ಪ್ರತ್ಯೇಕತೆಯ ಆಗ್ರಹಕ್ಕೆ ಮೇಲು ಕೈಯಾದರೆ, ರಾಷ್ಟ್ರದಲ್ಲಿ ಔತ್ತರೇಯರು ಮತ್ತು ದಾಕ್ಷಿಣಾತ್ಯರ ನಡುವೆ ಯಾದವೀ ಕಲಹವೇರ್ಪಡುವುದು.
__ಈ ಗೊಂದಲಮಯ ಸನ್ನಿವೇಶದಲ್ಲಿ ವಿದೇಶೀಯ ಆಕ್ರಮಣಕಾರರ ಆಗಮನವಾಗುವುದು ; ಭಾರತ ಮತ್ತೊಮ್ಮೆ ದಾಸ್ಯಕೂಪಕ್ಕೆ ತಳ್ಳಲ್ಪಡುವುದು.