ಆ ಬಗೆಗೆ ಯೋಚಿಸಿದಷ್ಟೂ ತಲೆನೋವು ಹೆಚ್ಚಿತೇ ಹೊರೆತು ಯಾವ ಹೊಳವೂ ಗೋಚರವಾಗಲಿಲ್ಲ.
ಧಾರವಾಡ ನಿಲಯದ ಕಾರ್ಯಕ್ರಮಗಳ ನಿರ್ವಾಹಕ ಅಧಿಕಾರಿ ಶ್ರೀ ಭಾಸ್ಕರ ಯೇಸುಪ್ರಿಯರು ಈ ಲೇಖಕನ ಪಾಲಿಗೆ ನಕ್ಷತ್ರಕರಾದರು.
ತಪ್ಪಿಸಿಕೊಳ್ಳಲಾಗದೆ, ಒಂದು ವಾರದ ಅವಧಿಯೊಳಗೆ ಆರು ಭಾಗಗಳ "ಆಹ್ವಾನ" ಮಾಲಿಕೆಯ ರೂಪುರೇಖೆಗಳನ್ನು ರಚಿಸಿ ಶ್ರೀ ವೈದ್ಯರ ಕೈಗಿತ್ತೆ. ನನ್ನ ಯೋಜನೆ, ವಿಚಾರ ಸರಣಿ, ಆಧಾರಕ್ಕಾಗಿ ನಾನು ಆರಿಸಿಕೊಂಡಿದ್ದ ಗ್ರಂಥಗಳು, ಕಲೆಹಾಕಿದ್ದ ಸಾಕ್ಷ್ಯ ಸಾಹಿತ್ಯ ಅವರಿಗೆ ಮೆಚ್ಚುಗೆಯಾದುವು.
ಒಂದೊಂದಾಗಿ ಆರು ಭಾಗಗಳನ್ನು ಬರೆದೆ. ಮುಗಿಸಿದಾಗ ಸಪ್ತ ನದಿಗಳಲ್ಲಿ ಮಿಂದು ಬಂದ ಅನುಭವವಾಯಿತು. ಕೃತಿಗಳ ಪ್ರಸಾರಕ್ಕೆ ಶ್ರೋತೃಗಳು ನೀಡಿದ ಸ್ವಾಗತ ಕಂಡು, ಕೃತಾರ್ಥನಾದೆ ಎಂದುಕೊಂಡೆ.
ಆ ಬಗೆಯ ಸಂತೃಪ್ತಿಗೆ ಹೆಚ್ಚಿನ ಬೆಲೆಯಿಲ್ಲ. ಕಾರಣವೆಷ್ಟೆ : ಉಪನ್ಯಾಸ__ಪ್ರವಚನಗಳಿಂದ, ನಾಟಕ__ರೂಪಕಗಳಿಂದ ಬಗೆಹರಿಯುವ ಸಮಸ್ಯೆಯೇ ಈ ರಾಷ್ಟ್ರದ್ದು? ಗೃಹಛಿದ್ರದ ಅಸ್ವಾಸ್ಥ್ಯ ಸುಲಭವಾಗಿ ನಿವಾರಣೆಯಾಗುವ ಲಕ್ಷಣಗಳು ದೇಶದಲ್ಲಿ ಕಾಣಿಸಲಿಲ್ಲ.
ಪರಿಸ್ಥಿತಿ ಹಾಗೆಯೇ ಮುಂದುವರಿದರೆ ಏನಾಗುವುದು ಸಾಧ್ಯವಿತ್ತು?
"ಆಹ್ವಾನ" ನಾಟಕ ಮಾಲಿಕೆಯ ನಾಲ್ಕನೆಯ ಭಾಗವಾದ ದುಃಸ್ವಪ್ನದಲ್ಲಿ ಆ ಸಾಧ್ಯತೆಯನ್ನು ಚಿತ್ರಿಸಿದ್ದೆ. ಅದು, ಮತ್ತೊಮ್ಮೆ ಈ ದೇಶದ ಮೇಲೆ ಪರಕೀಯರ ಆಕ್ರಮಣ. ನಮ್ಮ ಸ್ವಾತಂತ್ರ್ಯದ ಹರಣ.
೧೯೬೨ರ ಅಕ್ಟೋಬರ್ ತಿಂಗಳು ಚೀಣಿಯರು ಉತ್ತರ ದಿಕ್ಕಿನಿಂದ ಭಾರತದ ಮೇಲೆ ದಾಳಿ ನಡೆಸಿ, ವಿಚಾರಶೀಲ ಜಗತ್ತನ್ನು ದಂಗುಬಡಿಸಿದರು. "ದುಃಸ್ವಪ್ನ" ನಾಟಕದ ಒಂದಂಶ ಅದನ್ನು ಬರೆದ ಒಂದೇ ವರ್ಷದ ಅವಧಿಯಲ್ಲಿ ನಿಜವಾಗಿತ್ತು: ಅದು ಪರಕೀಯರ ಆಕ್ರಮಣ.