ಪುಟ:AAHVANA.pdf/೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


 ಆಹ್ವಾನ ಕೇಸರ್ ಲಿಂಗ್:

   "ಭರತಭೂಮಿಯ ಬಗೆಗೆ ಎಂತ ಅದ್ಭುತ ಮೊದಲ ಪರಿಚಯ ........ನಿಜವಾಗಿಯೂ ಇಡಿಯ ಹಿಂದೂದೇಶದ ಪ್ರಾತಿನಿಧಿಕ ರೂಪವನ್ನೇ ನಾನಿಲ್ಲಿ ಕಾಣುವಂತಿದೆ.   ಪ್ರತಿಯೊಂದು ಬಣ್ಣವನ್ನು, ಪ್ರತಿಯೊಂದು ಉಡುಪನ್ನು, ನಸುಗಪ್ಪು ತಮಿಳರಿಂದ ಹಿಡಿದು ಕಾಶ್ಮೀರದ ಶ್ವೇತ ವರ್ಣೀಯರವರೆಗಿನ ಎಲ್ಲಾ ರೀತಿಗಳ ಜನರನ್ನು ನಾನು ನೋಡುತ್ತಿದ್ದೇನೆ. ಇಲ್ಲಿ, ಸ್ವಾಭಿಮಾನಿಗಳಾದ ರಜಪೂತರಿದ್ದಾರೆ; ತಲೆಗೂದಲು ಜಟೆಗಟ್ಟದ ಸನ್ಯಾಸಿಗಳಿದ್ದಾರೆ. ಅಸಂಖ್ಯ ಭಾಷೆಗಳ ಭಾಷಾ ಪ್ರಭೇದಗಳ ಕಲರವದಿಂದ ವಾತಾವರಣ ತುಂಬಿದೆ. ನೂರು ವಿಭಿನ್ನ ಪರಂಪರೆಗಳು ನೂರು ಬೇರೆ ಬೇರೆ ಮುಖಗಳಿಂದ ಮಾತಾಡುತ್ತಿವೆ. ಜಾತಿ ಜಾತಿಯೊಡನೆ, ಪೂರ್ವಗ್ರಹ ಪೂರ್ವಗ್ರಹ ದೊಡನೆ ಮೈಯೊರಸುತ್ತಿವೆ. ಜನರೊಳಗಿನ ಈ ತೆರನಾದ ವೈವಿಧ್ಯವನ್ನು ಹಿಂದೆಂದೂ ನಾನು ಕಂಡುದಿಲ್ಲ."

ನಿರೂಪಕ :

       ಇಂತಹ ವಿವಿಧತೆಯಲ್ಲೂ ತೋರಿಬರುವ ಏಕತೆಯೇ ಭಾರತದ ಹೆಗ್ಗಳಿಕೆ. ಈ ಭೂಖಂಡದಲ್ಲಿ ನಾಗರಿಕತೆಯ ಮೊದಲ ಕುರುಹು ಕಾಣಿಸಿಕೊಂಡ ಕಾಲದಿಂದ ಈವರೆಗೆ, ಜನಪದವನ್ನು ಬಿಗಿದಿರುವುದು ಇದೇ ಏಕತೆಯ ಸೂತ್ರ.   ....ಉತ್ತರದಲ್ಲಿ ಹಿಮಾಚ್ಛಾದಿತ ಪರ್ವತಾವಳಿ,_ಉಳಿದ ಮೂರೂ ದಿಕ್ಕು ಗಳಲ್ಲಿ ವಿಸ್ತಾರವಾಗಿ ಮೈ ಚಾಚಿರುವ ಕಡಲು ; ತುಂಬಿ ಹರಿಯುವ ನದೀ ನದಗಳು ; ಕಣ್ಣು ತಣಿಸುವ ಹಸಿರು ಸಿರಿಯನ್ನು ಹೊತ್ತ ಫಲವತ್ತಾದ ನೆಲ_ಇಲ್ಲಿ, ಕ್ರಿಸ್ತಪೂರ್ವ ಮೂರು ಸಾವಿರ ವರ್ಷಗಳ ಸುಮಾರಿಗೆ ನಾಗರಿಕ ಜನ ವಾಸವಾಗಿದ್ದರು. ಸಿಂಧೂ ಕೊಳ್ಳದ ಆ ಉಚ್ಚ ಸಂಸ್ಕೃತಿಗೆ, ಹರಪ್ಪಾ_ಮೊಹೆಂಜೊದಾರೊಗಳು ಸಾಕ್ಷಿ, ಮುಂದೆ ಜಂಬೂ ದ್ವೀಪಕ್ಕೆ ನುಗ್ಗಿಬಂದ ಹೊಸ ನೀರೇ, ಆರ್ಯರ ಆಗಮನ.  ಅವರ ಪ್ರಮುಖನೊಬ್ಬನಾದ ಅರಸು ಭರತನಿಂದ ಈ ದೇಶ ಭರತವರ್ಷವಾಯಿತು. ಅಗ್ನಿಪೂಜಕ ಆರ್ಯರ ಸಹಸ್ರಾರು ಸಂವತ್ಸರಗಳ ಸಾಂಸ್ಕೃತಿಕ ಬೆಳವಣಿಗೆಯ ಘನೀರೂಪವೇ ಋಗ್ವೇದ.