ಪುಟ:Abhaya.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೧೦೧

--ಎಂದು ತುಂಗಮ್ಮನ ತಂದೆ ಸಹಜವಾಗಿಯೇ ಕೇಳಿದರು:

"ಏನೂ ಇಲ್ಲ...."

ಉತ್ತರಿಸಿದಾಗ ಆತ ತಡವರಿಸಿದಂತೆ ತೋರಿತು.

"ನೀನು ಹೋದ ಭಾನುವಾರವೇ ಮೈಸೂರಿಗೆ ಹೋಗಿರೌಬದೂಂತ ತುಂಗ ಅಂತಿದ್ಲು...."

ಆ ಮಾತುಗಳ ಹಿಂದಿನ ತಿಳಿವಳಿಕೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸುತಿತ್ತು ಆತನ ನೋಟ.

"ಹೌದು.ಹೋಗ್ಬೇಕಾಗಿತ್ತು ರಜಾ ಸಿಗಲಿಲ್ಲ.ಮೇಲಿನ ಶನಿವಾರ ಹೋಗ್ಬೇಕೂಂತಿದೀನಿ...."

ಮೂರ್ತಿ ಸುಳ್ಳು ಹೇಳುತಿದ್ದನೆಂದು ಯಾರೂ ಶಂಕಿಸಲಿಲ್ಲ.

"ಹೌದಪ್ಪಾ.ಬೇಗನೆ ಹೋಗಿಬಾ..."

ನಾರಾಯಣ ಮೂರ್ತಿ ಅವಸರದಲ್ಲಿದ್ದಂತೆ ತೋರಿತು ಮಾತುಕತೆಯನ್ನು ಅಲ್ಲಿಗೇ ನಿಲ್ಲಿಸಿ ಆತ ಹೊರಟು ಹೋದ.

ಮೇಲಿನ ಶನಿವಾರವೂ ಮೂರ್ತಿ ಮೈಸೂರಿಗೆ ಹೋಗಲಿಲ್ಲ.ತುಂಗಮ್ಮ,ತಮ್ಮನ ಮೂಲಕ,ಬಂದು ಹೋಗೆಂದು ಹೇಳಿ ಕಳುಹಿದಳು.ಆತ ಬರಲಿಲ್ಲ.

ತುಂಗಮ್ಮನಿಗೆ ಗಾಬರಿಯಾಯಿತು.ಒಬ್ಬಳೇ ಇದ್ದಾಗ ಆಕೆ ಅತ್ತು ಅತ್ತು ಸೊರಗಿದಳು.

ಈ ಸಂಬಂಧ ಏರ್ಪಡುವುದೆಂಬುದರ ಬಗ್ಗೆ ತುಂಗಮ್ಮನ ತಂದೆಗೆ ಆವರೆಗೂ ಸಂದೇಹವಿರಲಿಲ್ಲ.ಈಗ ನಾರಾಯಣ ಮೂರ್ತಿಯ ಉಪೇಕ್ಷೆಯ ವರ್ತನೆಯನ್ನು ಕಂಡು ಅವರು ವ್ಯಾಕುಲಗೊಂಡರು.

"ಹುಡುಗ ಮುಂಡೇದು.ಮನಸ್ಸು ಬದಲಾಯಿಸ್ತೇನೊ"

--ಎಂದು ಗೊಣಗಿದರು.

"ನೀನೇನಾದರೂ ಕೆಟ್ಟಮಾತು ಅಂದಿಯೇನೆ?"

--ಎಂದು ಮಗಳನ್ನು ಕೇಳಿದರು.

ಎಂತಹ ಪ್ರಶ್ನೆ!ತುಂಗಮ್ಮ ಉತ್ತರಕೊಡಲಿಲ್ಲ.

ಆಕೆಯ ತಂದೆ ಮತ್ತೊಮ್ಮೆ ಕೇಳಿದರು ಅದೇ ಪ್ರಶ್ನೆಯನ್ನು.