ಪುಟ:Abhaya.pdf/೧೧೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಒಲು ತಾಳ್ಮೆಯಿಂದ ಶಾಂತವಾಗಿ ಅವರು ಯೋಚಿಸಿದರು. ನಾರಾಯಣ ಮೂರ್ತಿ ತಾನಾಗಿ ಈ ವಿಷಯದ ಬಗ್ಗೆ ಚಕಾರವೆತ್ತುವವನಲ್ಲ. ಅವನ ಮನೆಯವರ ಕಿವಿಗೆ ಇದನ್ನು ಹಾಕುವುದರಿಂದ ಯಾವ ಪ್ರಯೋಜನವೂ ಇರಲಿಲ್ಲ. ಆದರೆ ಮೂರ್ತಿಯನ್ನೇ ಹಿಡಿದು ಮಾತನಾಡಿಸಿ ನೋಡುವ ಕಡೆಯ ಯತ್ನವೊಂದಿತ್ತು.

ತುಂಗಮ್ಮನನ್ನು ಕೆಟ್ಟ ಔಷಧಿಗಳ ಕೃತಕಪ್ರಯತ್ನಗಳ ಪ್ರಯೋಗಕ್ಕೆ ಒಳಗುಮಾಡುವುದಕ್ಕಂತೂ ಅವರು ಸಿದ್ಧರಿರಲಿಲ್ಲ

ಆದುದರಿಂದಲೆ, ಏನನ್ನೂ ಮಾಡದೆ ದಿನ ಕಳೆಯುವುದೂ ಸಾಧ್ಯವಿರಲಿಲ್ಲ.

ತುಂಗಮ್ಮನ ತಂದೆ ರಜೆಪಡೆದು ಬೆಳಗಾಂವಿಗೆ ಹೋದರು. ಅಲ್ಲಿ ಹಿರಿಯ ಮಗಳು ತುಂಬುಗರ್ಭಿಣಿ. ತಮ್ಮ ಮನೆತನಕ್ಕೆ ಒದಗಿದ್ದ ಆಪತ್ತಿನ ವಿಚಾರವಾಗಿ ಆಗ ಆಕೆಗೆ ಹೇಳುವುದು, ಆಕೆಯ ಮನೋಸ್ಥಿತಿ ದೇಹಸ್ಥಿತಿಗಳ ಮೇಲೆ ಕೆಟ್ಟ ಪರಿಣಾಮವಾಗಲು ಕಾರಣವಾಗುವುದು, ಮೂರ್ಖತನದ ಪರಮಾವಧಿಯೆಂದು ಅವರಿಗೆ ತೋರಿತು. ಅಳಿಯನಲ್ಲೂ ಬದಲಾವಣೆಗಳಾಗಿದ್ದುವು. ಆತನಿಗೆ ಈ ವಿಷಯ ಹೇಳಿದರೆ, ಸಹಾನುಭೂತಿ ದೊರೆಯದೇ ಹೋಗಬಹುದೆಂಬ ಶಂಕೆ ಮೂಡಿತು. ಹೇಳಿ ನಿರಾಶರಾಗುವುದಕ್ಕಿಂತ, ಹೇಳದೆ ಸುಮ್ಮನಿರುವುದೇ ಮೇಲು ಎಂದುಕೊಂಡರು.

ಹಿರಿಯ ಮಗಳು ಪದ್ಮ ಕೇಳಿದಳು:

"ತುಂಗ ಚೆನ್ನಾಗಿದಾಳ ಅಣ್ಣ ?"

"ಹೂನಮ್ಮಾ..."

"ಕರಕೊಂಡು ಬರ್‍ಬಾರ್‍ದಾಗಿತ್ತಾ ?"

"ಅದಕ್ಕೇನೇ, ಇನ್ನೊಂದ್ಸಲ ಇಬ್ರೂ ಬರ್‍ತೀವಿ."

"ತಮ್ಮನ್ನೂ ಕರಕೊಂಡು ಬನ್ನಿ."

"ಹೂಂ....ಹೂಂ..."

ಬಳಿಕ, ತಂದೆ ನಿರೀಕ್ಷಿಸಿದ್ದ ಪ್ರಶ್ನೆಯನ್ನೇ ಹಿರಿಯ ಮಗಳು ಕೇಳಿದಳು:

"ತುಂಗನ ಮದುವೆ ವಿಷಯ ಏನ್ಮಾಡ್ದೆ ಅಣ್ಣ ?"