ಪುಟ:Abhaya.pdf/೧೧೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

"ನೋಡ್ತಾ ಇದೀನಮ್ಮ . ಬರೋ ಬೇಸಗೇಲಿ ಆಗ್ಬೇಕು."

"ನಾರಾಯಣ ಮೂರ್‍ತೀಂತ_"

"ಆತನಿಗೀಗ ಮೈಸೂರ್ಗೇ ವರ್ಗವಾಗಿದೆ. ಆ ಸಂಬಂಧ ಕುದುರೋ ಮಟ್ಟಗೆ ಕಾಣೆ. ಆದರೂ ಕಟ್ಟಕಡೇ ಪ್ರಯತ್ನ ಮಾಡಿ ನೋಡ್ತೀನಿ. ಫಲ ಕೊಡೋದೂ ಕೊಡದೇ ಇರೋದೂ ಭಗವಂತನ ಇಚ್ಛೆ."

....ಹಾಗೆ ಭಗವಂತನ ಮೇಲೆ ಭಾರ ಹಾಕಿ ತುಂಗಮ್ಮನ ತಂದೆ ಮೈಸೂರಿಗೆ ಬಂದರು. ಅಲ್ಲಿಗೆ ಬಂದುದಕ್ಕೊಂದು ಕುಂಟು ಕಾರಣ ಹೇಳಿ ಬೀಗರ ಮನೆಯಲ್ಲಿ ಇಳಿದುಕೊಂಡರು. ಒಂದುದಿನವೆಲ್ಲಾ ಪ್ರಯತ್ನಪಟ್ಟ ಮೇಲೆ ನಾರಾಯಣಮೂರ್ತಿಯೊಬ್ಬನನ್ನೇ ಹಿಡಿಯುವುದು ಸಾಧ್ಯವಾಯಿತು

ಆತ ಅಪರಾಧಿಯೆಂಬುದು ಆತನ ಪ್ರತಿಯೊಂದು ಚಲನವಲನ ದಲ್ಲೂ ಸ್ಪಷ್ಟವಾಗಿತ್ತು.

ಆದರೂ ಆ ಭೂಪ ಹಾಡಿದ್ದೊಂದೇ ಹಾಡು;

"ನಾನೇನೂ ಮಾಡಿಲ್ಲ. ನೀವು ನನ್ನ ಏನು ಬೇಕಾದ್ರೂ ಮಾಡ್ಬೌದು."

ಮೊದಲು ತುಂಗಮ್ಮ ತಂದೆ, ಆದುದರಲ್ಲಿ ತಪ್ಪೇನೂ ಇಲ್ಲ, ಮದುವೆಯಾದರಾಯಿತು, ಎಂದರು. ಆ ಬಳಿಕ ಬೆದರಿಸಿ ನೋಡಿದರು ಕೊನೆಯಲ್ಲಿ ಕಣ್ಣಲ್ಲಿ ನೀರು ತಂದುಕೊಂಡು ಅಂಗಲಾಚಿದರು

ನಾರಾಯಣಮೂರ್ತಿಯ ಮುಖ ಕಪ್ಪಿಟ್ಟತು. ಆದರೆ ಆತನ ಹೃದಯ ಕರಗಲಿಲ್ಲ.

ನಿರಾಶರಾಗಿ ತುಂಗಮ್ಮನ ತಂದೆ ಎದ್ದು ನಿಂತು ಹೇಳಿದರು:

"ಇನ್ನೆಷ್ಟು ಮನೆಗಳಿಗೆ ಬೆಂಕಿ ಇಡ್ತೀಯಪ್ಪಾ. ನೀನು ಮನುಷ್ಯನಲ್ಲ, ರಾಕ್ಷಸ !"

....ರಾಕ್ಷಸರಬದಲು ಮನುಷ್ಯರನ್ನು ಹುಡುಕಿಕೊಂಡು ಅವರು ಬೆಂಗಳೂರಿಗೆ ಬಂದರು ಇನ್ನು ಹೆಚ್ಚು ದಿನ ತಡೆಯುವ ಹಾಗಿರಲಿಲ್ಲ....

ಮಾವಳ್ಳಿಯಲ್ಲಿ ಮನೆ ಮಾಡಿದ್ದ ತಮ್ಮ ಹಳೆಯ ಶಿಷ್ಯನೊಬ್ಬನನ್ನು ಅವರು ಹುಡುಕಿ ಹಿಡಿದರು.

ಅವರೇನೊ ಆತನ ಪಾದಕ್ಕೆ ಅಡ್ಡ ಬಿದ್ದು ಬೇಡಿಕೊಳ್ಳುವ ಸ್ಥಿತಿಗೂ ಬಂದಿದ್ದರು.