ಪುಟ:Abhaya.pdf/೧೨೧

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ

ಗೊಂಡು ಕಾಗರದದಮೇಲೆ ಮೂಡಿದಂತೆ, ಸರಸಮ್ಮ ಮರೆಯಾದರು. ತುಂಗಮ್ಮ ಕಂಡುದೊಬ್ಬರನ್ನೇ- ಚಿಂತೆಯ ಭಾರದಿಂದ ಬಾಗಿದ್ದ ತನ್ನ ತಂದೆಯನ್ನು, ಆತನ ಮುಂದೆ ನಿಂತು ತಡೆ ತಡೆಯುತ್ತ ಬಿಕ್ಕಿ ಬಿಕ್ಕಿ ಅಳುತ್ತ, ತನ್ನನ್ನು ಆತ ಅಶೀರ್ವದಿಸಿ ಹೋದ ದಿನದಿಂದ ಈವರೆಗಿನ ಎಲ್ಲ ವಿಷಯಗಳನ್ನೂ ತುಂಗಮ್ಮ ಬರೆದಳು. ಹಸ್ತಾಕ್ಷರ ಸುಂದರವಾಗಿರಲಿಲ್ಲ ಕಂಬನಿ ತೊಟ್ಟಿಕ್ಕಿ, ಕಾಗದ ಒಂದೆರಡು ಕಡೆ ಚಿತ್ತಾಯಿತು.

ತುಂಗಮ್ಮ ಬರೆದು ಮುಗಿಸುವ ಹೊತ್ತಿಗೆ, ಸರಸಮ್ಮನ ಕಾಗದ ಸಿದ್ದವಾಗಿತ್ತು.

"ಇಲ್ಲಿ ಕೊಡು"

_ಎಂದ ಕೇಳಿ, ತುಂಗಮ್ಮ ಬರೆದುದನ್ನು ಅವರು ಇಸಕೊಂಡರು. ಸರಸಮ್ಮ ಅದನ್ನೋದುತಿದ್ದಂತೆ, ಮತ್ತೆ ತಾನು ಉಪಾಧ್ಯಾಯಿನಿಯ ಎದುರೇ ಇರುವಂತೆ ತುಂಗಮ್ಮನಿಗೆ ಭಾಸವಾಯಿತು.

"ಸರಿ"

_ಎಂದು ತಲೆಯಾಡಿಸಿದರು ಸರಸಮ್ಮ ತುಂಗಮ್ಮನಿಗೆ ಸಮಾಧಾನವೆನಿಸಿತು. ಆದರೆ, ಸರಸಮ್ಮನ ಕಣ್ಣುಗಳು ಹನಿಗೂಡಿದುದನ್ನು ಆಕೆ ಕಾಣಲಿಲ್ಲ.

"ದೊಡ್ಡಮ್ಮ! ದೊಡ್ಡಮ್ಮ!"

-ಎಂದು ಅವಸರದ ಧ್ವನಿಯಲ್ಲಿ ಕರೆಯುತ್ತಲೆ ಜಲಜ ಒಳಬಂದಳು.

"ದೊಡ್ಡಮ್ಮ! ಮೊನ್ನೆ ಒಂದ್ಲಲ್ಲ ಆ ತಮಿಳರ ಹುಡುಗಿ, ಆಕೆ ಕೊಬರಿ ಕದ್ಲಂತೆ. ನಿಮಗೆ ಗೊತ್ತಾಗ್ಬಾರದೂಂತ ಅವಳ ಬಾಯಿಗೆ ಬಟ್ಟೆ ತುರುಕಿಸಿ ಅಡುಗೆ ಮನೇಲಿ ಎಲ್ರೂ ಸೇರಕೊಂಡು ಚೆನ್ನಾಗಿ ಧಳಿಸ್ತಿದಾರೆ!"

ತುಂಗಮ್ಮನ ಮೈ ಮುಳ್ಳಾಯಿತು ಅದನ್ನು ಕೇಳಿ.

ಸರಸಮ್ಮ ಎದ್ದು ಅಡುಗೆ ಮನೆಯತ್ತ ಹೋದರು.

"ಅಯ್ಯೋ ಪಾಪ! ಎಷ್ಟು ಏಟು ಬಿತ್ತೊ!"

-ಎಂದು ತುಂಗಮ್ಮ ಕನಿಕರ ಸೂಚಿಸಿದಳು.

"ಪಾಪ? ಒಳ್ಳೇ ಹೇಳ್ದೆ! ಆಕೆ ಮಹಾಕಳ್ಳಿ . ಇವತ್ತು ಕೊಬರಿ ತಿಂದ್ರೆ ನಾಳೆ ನಮ್ಮನ್ನೇ ತಿಂತಾಳೆ! ಚೆನ್ನಾಗಿ ನಾಲ್ಕೇಟು ಬೀಳ್ಲಿಬಿಡು!