ಪುಟ:Abhaya.pdf/೧೨೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಕಸಬಿನವಳು.ನೋಡೋಕೆ ಹ್ಯಾಗಿದ್ಲೂಂತ!ಮುಖ ಎಲ್ಲ ಉದ್ಕೊಂಡು.ಅಬ್ಬ!ಬಣ್ಣ ಮಾತ್ರ ಬಿಳಿ"

"ಏನಾಯ್ತು ಅವಳಿಗೆ?"

"ಅದೇ...ರಾತ್ರೆ ಒಂದೋಳು ಸರ್ಕಸ್ ಹುಲಿ ಹಾಗೆ ಗುರುಗುಟ್ಟಿಕೊಂಡೇ ಇದ್ಲು.ಹಗಲೊತ್ತು ಮಾತಾಡ್ಸೋಕೆ ಹೋದ್ರೆ ಮೈಮೇಲೆ ಬೀಳ್ತಿದ್ಲು.ಅವಳ ತಂಟೆಗೆ ಹೋಗ್ಬೇಡಿ-ಅಂದ್ರು ದೊಡ್ಡಮ್ಮ.ನಾವೂ ಸುಮ್ನಿದ್ವಿ.ಆದರೆ ರಾತ್ರೆ ಬಜಾರಿ ಕಕ್ಕಸು ಬಾಗಿಲು ಹತ್ತಿ ಗೋಡೆ ಏರಿ ಕೆಳಗೆ ಹಾರಿ ತಪ್ಪಿಸ್ಕೊಂಡ್ಲು.ಯಾರಿಗೂ ಎಚ್ಚರವೇ ಆಗ್ಲಿಲ್ಲ.ತಪ್ಪಿಸ್ಕೊಂಡೋಳು,ನೋಡಿ ಕಾಣ್ತಿದೆಯೆಲ್ಲ,ಆ ಹಾದೀಲೆ ಓಡಿದ್ಲು,ಮಳೆ ನಿಂತು ಒಂದುವಾರ ಆಗಿತ್ತಷ್ಟೆ.ಆ ಹೊಂಡದಲ್ಲಿ ನೀರಿತ್ತು ಓಡ್ತಾ ಹಾದಿ ಕಾಣಿಸ್ದೆ ಬಿದ್ಲು ಆಗ,ಅಯ್ಯಯ್ಯೋ ಸತ್ತೇ ಅಂತ ಕಿರಿಚ್ಕೊಂಡ್ಲಂತೆ ರಾತ್ರೆಹೊತ್ನಲ್ಲಿ ಅದೇನು ಕಿವೀಂತ ನಮ್ಮ ದೊಡ್ಡಮ್ಮನ್ದು!ಅವರಿಗೆ ಎಚ್ಚರವಾಯ್ತು.ಲಾಟೀನು ಹಚ್ಚಿ ನಾವೆಲ್ಲಾ ಮಲಗಿದ್ದ ಜಾಗ ನೋಡ್ಕೊಂಡು ಬಂದ್ರು.ರಾತ್ರೆ ಅವಳೊಬ್ಬಳೇ ಮೂಲೇಲಿ ಮಲಗಿದ್ಲು ಆಜಾಗವೋ ಖಾಲಿ.ನಡೆದಿದ್ದು ಏನೂಂತ ತಿಳಿದ್ಹೋಯ್ತು ದೊಡ್ಡಮ್ನಿಗೆ,ನಾನು ಮತ್ತು ಲಲಿತಾ ಇಬ್ಬರ್ನೂ ಕರಕೊಂಡು,ಮನೆಗೆ-ಇದಕ್ಕೆ-ಹೊರಗಿಂದ ಬೀಗ ಹಾಕಿ ದೊಡ್ಡಮ್ಮ ಹೊರಟ್ರು ಅಲ್ಲೊಂದು ಮನೆ ಇದೆ ನೋಡಿ ಅವರನ್ನೂ ಎಬ್ಬಿಸಿದ್ವಿ,ಒಳ್ಳೆಯವರು ವಾಪ..."

ಮೊದಲು ಅಭಯಧಾಮವನ್ನು ಶಾಲೆಗೆ ಹೋಲಿಸಿದ್ದಳು ತುಂಗಮ್ಮ ಈಗ ಆ ಶಾಲೆ ಸೆರೆಮನೆಯಾಯಿತು.ಸೆರೆಮನೆ ಒಮ್ಮೆಲೆ,ತುಂಟ ಮಕ್ಕಳೊಡನೆ ವಾಸಿಸುತಿದ್ದ ಪ್ರೀತಿಯ ತಾಯಿಯ ಬಡಮನೆಯಾಯಿತು....ಚಿತ್ರವಿಚಿತ್ರವಾಗಿ ಕೇಳಿಸಿತು ಜಲಜ ಹೇಳುತಿದ್ದ ಕಥೆ....

"ಯಾಕಕ್ಕ ಹೂಂ ಅನ್ನೋಲ್ಲ ಕೇಳ್ತಾ ಇದ್ದೀಯೋ ಇಲ್ವೊ?"

"ಕೇಳ್ತಿದೀನಿ,ಹೇಳೆ"

"ಹೊಂಡವೇನೂ ಆಳವಾಗಿರ್ಲಿಲ್ಲಾಂತಿಟ್ಕೊ ಬಜಾರಿ ಹೆದಿರ್ಕೊಂಡ್ಬಿಟ್ಟಿದ್ಲು ಅಷ್ಟೆ.ಮೈಯ್ಯೆಲ್ಲಾ ಆ ಕೆಸರು ಗಲೀಜು....ಥೂ....ತೆಪ್ಪಗೆ ನಮ್ಜತೇಲೇ ಬಂದ್ಲು.ಒಂದು ಕೈನ ಲಲಿತಾ ಬಿಗಿಯಾಗಿ ಹಿಡಕೊಂಡ್ಲು.