ಪುಟ:Abhaya.pdf/೧೭೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೧೬೬
ಅಭಯ


ಉಪಯೋಗಕ್ಕೆಂದು ಅಲ್ಲೆ ಹಾಕಿದ್ದ ಪುಟ್ಟ ಒರಗು ಬೆಂಚನ್ನು ತೋರಿಸುತ್ತ
ಅವರೆಂದರು.
"ತುಂಗಾ,ತೆಪ್ಪಗೆ ಅಲ್ಲಿ ಕೂತ್ಕೊಮ್ಮ ನೀನು."
"ನಾನೊಲ್ಲೆ ಬೇರೆ ಹುಡುಗೀರು ಏನಾದ್ರೂ ಅಂತಾರೆ."
ಸರಸಮ್ಮನಿಗೆ ರೇಗಿಹೋಯಿತು.
"ಸಾಕು ಹುಚ್ಚುಚ್ಚಾರ! ಏನಾದರೂ ಪುಸ್ತಕ ಹಿಡಕೊಂಡು ಓದ್ತಾ
ಕೂತ್ಕೊ!"
ಮನಸ್ಸಿಲ್ಲದ ಮನಸಿನಿಂದ ತುಂಗಮ್ಮ,ಪುಸ್ತಕಗಳಿದ್ದ ಬೀರುವಿನತ್ತ
ಸಾಗಿದಳು.
ಆಗ ಜಲಲೆಯ ಸ್ವರ ಕೇಳಿಸಿತು:
"ಓ! ಇಲ್ಲಿದೀಯಾ. ಆ ಹುಡುಗೀರು ಹೇಳೋದಕ್ಕೂ ನೀನು
ಮಾಡೋದಕ್ಕೂ ಸರಿಹೋಯ್ತು"
ತುಂಗಮ್ಮ ತಿರುಗಿ ನೋಡಿದಳು.
ಜಲಜೆಯ ಎದುರು ಹುಬ್ಬುಗಳನ್ನೇರಿಸುತ್ತ ಸರಸಮ್ಮ ಕೇಳಿದರು:
"ಅದೇನೆ ಹುಡುಗೀರು ಹೇಳ್ತಿರೋದು ?"
" ತುಂಗಕ್ನಿಗೆ ಈಗ್ಲೇ ಪುಕೀ ಅಂತ ಹೆಸರಿಟ್ಬಿಟ್ಟಿದಾರೆ ದೊಡ್ಡಮ್ಮ."
"ಓ!"
ಸರಸಮ್ಮ ನಕ್ಕರು. ತುಂಗಮ್ಮನಿಗೆ ಮಾತ್ರ ಅರ್ಥವಾಗಲಿಲ್ಲ.
ಕಳವಳ ಕುತೂಹಲಗಳೆರಡೂ ಬೆರೆತ ಧ್ವನಿಯಲ್ಲಿ ಆಕೆ ಜಲಜೆಯನ್ನು
ಕೇಳಿದಳು:
"ಅದೇನೆ ಜಲಜ ಹಾಗಂದ್ರೆ?"
"ಪುಕೀ- ನಿಂಗೊತ್ತಿಲ್ವೆ ತುಂಗಕ್ಕ?"
"ಇಲ್ಲ,ಹೇಳು."
"ಪುಸ್ತಕ ಕೀಟ ಅಂತ. ಅದೇನು ತುಮಕೂರು ಸ್ಕೂಲೊ ನಿಮ್ಮದು!
ಇಷ್ಟೂ ಹೇಳ್ಕೊಟ್ಟಲ್ವೆ ಅಲ್ಲಿ?"
"ಹೌದು ಅದನ್ನೆಲ್ಲ ಹೇಳ್ಕೊಡೋಕೇ ಸ್ಕೂಲು ಇರೋದು."
--ಎಂದು ಸರಸಮ್ಮ ಜಲಜೆಯನ್ನು ಅಣಕಿಸಿದರು.