ಪುಟ:Abhaya.pdf/೧೭೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೭೦
ಅಭಯ

ತಾವೇ ಅಲ್ಲಿ ಇಲ್ಲಿ ಕಾಡಿ ಬೇಡಿ ಹೂ ಗಿಡಗಳನ್ನೂ ಬೀಜಗಳನ್ನೂ
ತಂದು ನೆಟ್ಟರು. ಹುಡುಗಿಯರ ಜತೆಯಲ್ಲಿ ತಾವೂ ವಾತಿಗಳಿಗೆ ನೀರೆರೆದರು.
ಮೊದಲು ಗುಲಾಬಿಯ ಮೊಗ್ಗು....ಮಲ್ಲಿಗೆಯ ಕಂಪಿನ ಮೊದಲದಿನ....
ಆ ಬಳಿಕ ನಗುತ್ತ ಅರಳತೊಡಗಿದ ಸೂರ್‍ಯಕಾಂತಿ....
..."ಪೋಸ್ಟ್ !
-ಆ ಪದ ಸರಸಮ್ಮನನ್ನು ಎಚ್ಚರಗೊಳಿಸಿತು. ಕಿಟಕಿಯ ಮೂಲಕ
ಏನೋ ಹಾದುಬಂದು ಕೊಠಡಿಯೊಳಕ್ಕೆ ಬಿತ್ತು ಸರಸಮ್ಮ ಎದ್ದುನಿಂತು
ತಿರುಗಿನೋಡಿದರು.
ಕಾಗದಗಳಿರಲಿಲ್ಲ. ಇದ್ದುದೊಂದೇ ಪತ್ರಿಕೆ. ಸಂಪಾದಕರೊಬ್ಬರು
ಆ ವಾರಪತ್ರಿಕೆಯನ್ನು ಅಭಯಧಾಮಕ್ಕೆಂದು ಉಚಿತವಾಗಿ ಕಳುಹುತಿದ್ದರು.
ಅದನ್ನೆತ್ತಿಕೊಂಡು ಬಿಡಿಸಿದರು ಸರಸಮ್ಮ.
...ಹೊದಿಕೆಯಮೇಲೆ ತುಂಟತನ-ಮುಗ್ಥತೆಗಳ ಪ್ರತಿಮೂರ್ತಿಯಾ
ದೊಂದು ವಿಶಾಲ ವದನದ ಭಾವ ಚಿತ್ರವಿತ್ತು. ಅದರ ಕೆಳಗೆ ಬರೆದಿದ್ದರು:
' ಭಾರತೀಯ ಚಿತ್ರರಂಗದಲ್ಲಿ ಉದಿಸಿರುವ ನವತಾರೆ-ನಿಮ್ಮಿ.'

ಸಂಜೆ, ಹಾರ್‍ಮೋನಿಯಂ ಸ್ವರಹೊರಡಿಸಿತು. ಮೃದಂಗ ತಂ-ತಂ
ಎಂದು ಧ್ವನಿಗೂಡಿಸಿತು. ಗಜಲ್ ಗಜಲ್ ಎಂದಿತು ಸುಮತಿಯ ಕಾಲಗೆಜ್ಜೆ...
ಸರಸಮ್ಮನಿಗೆ ಅದನ್ನೆಲ್ಲ ನೋಡಿ ಆಶ್ಚರ್ಯವೆನಿಸುತಿತ್ತು. ಮುಖ
ಕೈಗಳಿಗೆ ಬಳೆದಿದ್ದ ಆ ಬಣ್ಣವನ್ನು ಅವರು ಹೇಗೆ ತಯಾರಿಸಿದರೊ! ಕಚ್ಚೆ
ಯುಟ್ಟಿದ್ದ ಬಣ್ಣದಸೀರೆ. ಎರಡು ತಿಂಗಳ ಹಿಂದೆ ಬಂದ ತೆಲುಗು ಹುಡುಗಿಯ
ದಿರಬೇಕು. ಎದ್ದು ನಿಂತಿದ್ದ ಮಾಟವಾದ ಎದೆಯನ್ನು ನೋವಾಗದಂತೆ
ಮುಚ್ಚಿದ್ದ ರೇಷ್ಮೆಯ ಕುಪ್ಪಸ. ವರ್ಷದ ಆರಂಭದಲ್ಲಿ ಅಭಯಧಾಮವನ್ನು
ಬಿಟ್ಟುಹೋದ ಶ್ರೀಮಂತ ಹುಡುಗಿ ಅದನ್ನು ಕೊಟ್ಟಿರಬೇಕು.
ದಿಮಿ ಧಿಮಿ ತಕ-ತಕ ಥಕ ಧಿಮಿ....ತದಿಗಡತ್ತೋಂ....
ಸುಮತಿ, ಕೈ ಜೋಡಿಸಿ ಬಾಗಿ ನಮಿಸಿದಾಕೆ, ಹಗ್ಗ ಹರಿದುಕೊಂಡ
ಕರುವಿನ ಹಾಗೆ, ನಡುವಿನಲ್ಲಿ ಖಾಲಿಯಾಗಿರಿಸಿದ್ದ ವೃತ್ತದೊಳಗೆ ಸುತ್ತು
ಸುತ್ತುವರಿದು ಕುಣಿದಳು.