ಪುಟ:Abhaya.pdf/೧೭೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ಕೃಷ್ಣ....ಆ ಮುದ್ದು ಕೃಷ್ಣನ ಬಾಲಲೀಲೆಗಳು 'ಅಸಾಧ್ಯ'ವಾಗಿದ್ದುವು ...
ಬೆಣ್ಣೆಯನ್ನು ಕದ್ದ ಕೃಷ್ಣ - ರಾಧೆಯನ್ನು ಮೋಹಿಸಿದ ಕೃಷ್ಣ....
ಮೊದಲ ನೃತ್ಯವಾದಾಗಲೇ ಯಾರೋ ಎದ್ದು ದೀವ ಹಾಕಿದ್ದರು....
ವಿದ್ಯುದ್ದೀಪಗಳ ಬೆಳಕಿನಲ್ಲಿ ಕುಣಿಯುತಿದ್ದ ಕೃಷ್ಣ ಅಲ್ಲಿದ್ದ ಗೋಪಿಕಾ ಸ್ತ್ರೀಯರ ಮೇಲೆಲ್ಲಾ ಮಾಯೆಯ ಬಲೆ ಬೀಸಿದ.
ನೃತ್ಯ ಮುಗಿದಾಗ ಚೆನ್ನಾಗಿ ಕತ್ತಲಾಗಿತ್ತು.
ಜಲಜ ಎದ್ದು ನಿಂತು, "ಕಾರ್ಯಕ್ರಮ ಮುಗಿಯಿತು.....ಎಲ್ಲರಿಗೂ ವಣಕ್ಕಂ,” ಎಂದಳು ...
ಹುಡುಗಿಯರು ಗುಂಪು ಗುಂವಾಗಿ ಕೃಷ್ಣನಿಗೆ ಮುತ್ತಿಗೆ ಹಾಕಿದರು. ತುಂಗಮ್ಮನೂ ಬಳಿಹೋಗಿ ಸುಮತಿಯ ಕೈ ಕುಲುಕಿ "ಚೆನ್ನಾಗಿತ್ತು ?” ಎ೦ದಳು.
ಮೂಗಿ ಕಲ್ಯಾಣಿ ಮಾತ್ರ ನಾಚಿಕೆಯ ಮುದ್ದೆಯಾಗಿ ಮೂಲೆಯಲ್ಲೆ ನಿಂತಳು. ಲಲಿತಾ, ಗುಂಪಿನತ್ತ ಸುಳಿಯಲಿಲ್ಲ.
ಸರಸಮ್ಮ ಹುಡುಗಿಯರನ್ನೊಮ್ಮೆ ನೋಡಿನಕ್ಕು, ತಮ್ಮ ಕೊಠಡಿಗೆ ಹೋದರು. ಆದರೆ ಒಬ್ಬರೆ ಉಳಿದಾಗ ಅವರ ಮುಖದ ಮೇಲೆ ನಗುವಿರಲಿಲ್ಲ.
ದೇವತಾಪ್ರಾರ್ಧನೆ.. .ಆಫೀಸು ಕೊಠಡಿಯಲ್ಲಿ ಹೂದಾನಿ ಇಡುವ ಪ್ರಸ್ತಾಪ....ಊಟ.... ನಿದ್ದೆ.
ಸರಸಮ್ಮನಿಗೆ ಬಹಳ ಹೊತ್ತು ನಿದ್ದೆ ಬರಲಿಲ್ಲ. ಸೆಖೆ ಅಸಹನೀಯ ವಾಗಿತ್ತು.
ಅವರೆದ್ದು ಹೊರಬಂದರು.. ಜಗಲಿಯಲ್ಲೂ ಹಜಾರದಲ್ಲಿ ಮಲಗಿದ್ದರು ಹುಡುಗಿಯರು. ತಿಂಗಳ ಬೆಳಕು ಹಜಾರದೊಂದು ಭಾಗದ ಮೇಲೆ ಬಿದ್ದಿತ್ತು.
ಸರಸಮ್ಮ ನೋಡಿದರು - ಸುಮತಿಯ ಹಾಸಿಗೆ ಖಾಲಿಯಾಗಿತ್ತು.
ಆಕೆಯನ್ನು ಹುಡುಕುವುದು ಕಷ್ಟವಾಗಿರಲಿಲ್ಲ. ಲಲಿತೆಯ ಹಾಸಿಗೆ ಯಲ್ಲಿದ್ದಳಾಕೆ - ಮೈ ಮುದುಡಿಕೊಂಡು, ಲಲಿತೆಗೆ ಅಂಟಿಕೊಂಡು.
ಸರಸಮ್ಮನ ಊಹೆ ಸುಳ್ಳಾಗಿರಲಿಲ್ಲ. ಅವರು ಮುಖಬಾಡಿಸಿಕೊಂಡು ಒಳಹೋದರು.