೧೮೪ ಅಭಯ
"ಒಂದು ರೋಜಾ ಹೂ ಕಿತ್ತು ಮುಡಿಸ್ಲಾ ತುಂಗಕ್ಕನಿಗೆ?"
"ಅದಕ್ಕೂ ಕೇಳ್ಬೇಕೇನೆ ?"
ಇನ್ನೊಂದು ಕೈಯಲ್ಲಿ ಬೆನ್ನಹಿಂದೆ ಅಡಗಿಸಿ ಇಟ್ಟಿದ್ದ ರೋಜಾ ಹೂವನ್ನು ಎದುರಿಗೆ ಹಿಡಿದು ತೋರಿಸಿದಳು ಜಲಜ. " ನೋಡಿ ದೊಡ್ಡಮ್ಮ! ನಿಮ್ಮ ಒಪ್ಪಿಗೆ ಸಿಕ್ಕಿಯೇ ಸಿಗತ್ತೇಂತ ಆಗ್ಲೇ ಕಿತ್ತಿದ್ದೆ."
“ ಖಿಲಾಡಿ !"
ತಂದೆ ಮಕ್ಕಳು ಎದ್ದು ನಿಂತಾಗ, ಸರಸಮ್ಮನ ಸೂಚನೆಯಂತೆ ಜಲಜ ಮುಂದಾಗಿಯೇ ಹೋಗಿ ಬಾಗಿಲು ತೆರೆದಳು ಹೊಸತಾಗಿ ಬಂದವರು, ಸದಾಕಾಲವೂ ಬಾಗಿಲಿಗೆ ಜೋತುಕೊಂಡೇ ಇರುತಿದ್ದ ಬೀಗವನ್ನು ನೋಡು ವುದು ಸರಸಮ್ಮನಿಗೆ ಇಷ್ಟವಿರಲಿಲ್ಲ.
ಬಾಗಿಲಬಳಿ ನಿಲ್ಲುತ್ತ, ಹೊರಕ್ಕೆ ಮೆಟ್ಟಲಿಳಿಯುತಿದ್ದ ತಂದೆ ಮಕ್ಕ ಳನ್ನುದ್ದೇಶಿಸಿ ಅವರೆಂದರು.
" ಸಾಯಂಕಾಲ ಐದು ಘಂಟೆಯೊಳಗಾಗಿ ಬಂದ್ಬಿಡಿ."
ತಾವು ಮೂವರ ಪರವಾಗಿಯೂ ತುಂಗಮ್ಮ ಉತ್ತರವಿತ್ತಳು:
“ ಬರ್‍ತೀವಿ ದೊಡ್ಡಮ್ಮ.”
ಹಾಗೆ ಹೇಳಲು ತಿರುಗಿ ನೋಡಿದಾಗ, ಅಭಯಧಾಮದ ಎಲ್ಲರ ಕಣ್ಣುಗಳೂ ತಮ್ಮನ್ನ ದಿಟ್ಛಿಸುತಿದ್ದಂತೆ ತುಂಗಮ್ಮನಿಗೆ ತೋರಿತು.
ಜಲಜ ಎವೆಇಕ್ಕದೆ ತುಂಗಮ್ಮನನ್ನೂ ಆಕೆಯ ತಂದೆಯನ್ನೂ ತಮ್ಮನನ್ನೂ ನೋಡುತಿದ್ದಳು. ಆಕೆಯೆಂದಳು:
" ತುಂಗಕ್ಕ, ಬೇಗ ಬಾ”
"ಹೂಂ."
ಬಾಗಿಲು ಮುಚ್ಚಿಕೊಂಡಿತು.
ಹೊರಗೆ ಬೀದಿಗಿಳಿದ ಮೇಲೂ ತುಂಗಮ್ಮ ತಿರುಗಿನೋಡಿದಳು. ಅಭಯಧಾಮದ ಆಫೀಸು ಕೊಠಡಿಯ ಕಿಟಕಿ ಕಾಣಿಸಿತು ಆ ಕಿಟಕಿಯಲ್ಲಿ ಜಲಜೆಯ ಮುಖವಿತ್ತು ..ಆ ಮುಖದಲ್ಲಿ ನಗುವಿರಲಿಲ್ಲ. ಅದು ಬಾಡಿತ್ತು.