ಪುಟ:Abhaya.pdf/೧೯೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

೧೮೬ ಅಭಯ --ಎಂದರು ಸರಸಮ್ಮ. ಹಾಡಿಗೆ ವಿವರಣೆ ಎಂಬಂತೆ ಅವರೆಂದರು : “ಸಂಗೀತದ ಪಾಠ ಆಗ್ತಿದೆ.” ನಿವೃತ್ತ ಉಪಾಧ್ಯಾಯರಿಗೆ ಹಾಗೆ೦ದು ಹೇಳಬೇಕಾದ್ದೇ ಇರಲಿಲ್ಲ ಅವರು ಕುತೂಹಲದಿಂದ ಪಾಠ ಹೇಳಿಕೊಡುತಿದ್ದ ಅಧ್ಯಾಪಿಕೆಯನ್ನು ನೋಡಿದರು ಅಲ್ಪ ಗೌರವ ಧನ ಸ್ವೀಕರಿಸಿ, ಅಭಯಧಾಮಕ್ಕಾಗಿ ತಮ್ಮ ಅಮೂಲ್ಯ ಸಮಯದ ಒಂದಂಶವನ್ನು ವ್ಯಯಮಾಡುತಿದ್ದ ಆ ಸಂಗೀತ ವಿದುಷಿ ಒಂದು ಹತ್ತು ಹುಡುಗಿಯರೆದುರು ಚಾಪೆಯ ಮೇಲೆ ಗಂಭೀರವಾಗಿ ಕುಳಿತಿದ್ದರು ಸರಸಮ್ಮ ಮುಂದಾಗಿ, ತಂದೆಮಕ್ಕಳನ್ನು ಆಫೀಸು ಕೊಠಡಿಯತ್ತ ಕರೆದೊಯ್ದರು. ಹೊರಗಿನಿಂದ ಬಂದ ಗಂಟು ಮೂಟೆಗಳಲ್ಲೇನಿದೆಯೆಂದು ಹುಡುಗಿಯರು ನೋಡಬಯಸಿದರೂ ಬಾಗಿಲ ಬಳಿ ನಿಲ್ಲದೆ, ಅಭಯಧಾಮದ ಶಿಷ್ಟಾಚಾರಕ್ಕೆ ಅನುಗುಣವಾಗಿ, ಚೆದರಿ ಹೋದರು ಉಲ್ಲಾಸವಾಗಿದ್ದಳು ತುಂಗಮ್ಮ. ಬಿಳಿಚಿಕೊಂಡಿದ್ದ ಮುಖದಲ್ಲಿ ರಕ್ತ ಸಂಚಾರವಾಗಿ, ಆಕೆಯ ಸೌಂದಯ್ಯಕ್ಕೆ ಕಳೆಕಟ್ಟಿತ್ತು ತುಂಗಮ್ಮ, ಮಮತೆಯ ತಂದೆಯನ್ನೂ ಪ್ರೀತಿಯ ತಮ್ಮನನ್ನೂ ಮರಳಿ ಪಡೆದು ಸುಖಿಯಾಗಿದ್ದಳು.... ಜನದಟ್ಟಣೆಯ ಬೀದಿಗಳಲ್ಲಿ ಸಂಚಾರ.. ಇಂದ್ರಭವನದಲ್ಲಿ ಮೇಜಿನಮೇಲಿನ ಊಟ....ಬಳೆಯಂಗಡಿ-ಬಟ್ಟೆಯಂಗಡಿ.. ಹೂವು ಹಣ್ಣಿನಂಗಡಿ .. .ತಾನು ಬೇಡವೆಂದಿದ್ದರೂ ತಂದೆ ಖರ್ಚುಮಾಡಿದ್ದರು. ತಂದೆಯಿಂದ ಹಣ ಪಡೆದು ತುಂಗಮ್ಮ, ಬಿಸ್ಕತ್ತು ಬಣ್ಣದೊಂದು ಬುಷ್ ಕೋಟನ್ನು ತಮ್ಮನಿಗೆ ತೆಗೆದು ಕೊಟ್ಟಿದ್ದಳು...ಏಕಾಂತದಲ್ಲಿ ಜಲಜೆಯ ಭುಜದ ಮೇಲೆ ತಲೆಯಿರಿಸಿ ಸದ್ದಿಲ್ಲದೆ ನಗು ನಗುತ್ತ ಅಳುವಷ್ಟು ಸುಖಿಯಾಗಿದ್ದಳು ತುಂಗಮ್ಮ. ಕ್ಷಮೆ ಯಾಚಿಸುವವರ ಸ್ವರದಲ್ಲಿ ಆಕೆಯ ತಂದೆ ಹೇಳಿದರು: “ಇಲ್ಲಿಗೇಂತ ಒಂದಿಷ್ಟು ಏನೇನೊ ತಗೊಂಡು ಬಂದಿದೀವಿ.ನೀವು ನಿರಾಕರಿಸಬಾರದು.” ಸರಸಮ್ಮನಿಗೆ ಯೋಚನೆಗಿಟ್ಟುಕೊಂಡಿತು. “ಅಯ್ಯೋ ! ಯಾಕ್ತ೦ದ್ರಿ ? ಹೊರಗಿನ ತಿಂಡಿಗಿಂಡಿ ಏನೂ ತಗೋ ಕೂಡದೂಂತ ನಿಯಮ ಇದೆಯಲ್ಲ ! ಹೇಳಿ ತುಂಗ ನೀನು ?”