ಪುಟ:Abhaya.pdf/೧೯೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೧೮೮
ಅಭಯ


"ಇದೆ. ಇದೆ. ಅದಕ್ಕೇನು? ಹೋಗ್ತಾ ಕೊಂಡು ಕೊಂಡರಾಯ್ತು
ಬೇಕಾದ್ರೆ."
ಇನ್ನೊಂದು ಪೊಟ್ಟಣವನ್ನು ತನ್ನ ಎದೆಗೊರಗಿಸಿಕೊಂಡು ತುಂಗಮ್ಮ ನಿಂತಿದ್ದಳು:
ಅಪರಾಧಿಯಂತೆ ಆಕೆಯ ತಂದೆಯೆಂದರು:
"ಮಗಳಿಗೆ ಒಂದು ಸೀರೆ ತೆಗೆಸಿಕೊಟ್ಟೆ ಆಮೇಲೆ ಅವಳೇ ಏನೇನೋ
ಕೊಂಡ್ಕೊಂಡ್ಲು ತೋರ್ಸಮ್ಮ ತುಂಗ."
ತುಂಗಮ್ಮನಿಗೆ ನಾಚಿಕೆಯಾಯಿತು ದೊಡ್ಡಮ್ಮ ಏನೆನ್ನುವರೋ
ಎಂದು ಹೃದಯ ಡವಡವನೆ ಹೊಡೆದುಕೊಂಡಿತು. ಆದರೂ ಆಕೆ ಕಟ್ಟು
ಬಿಚ್ಚಿದಳು.
...ಅದರಲ್ಲಿದ್ದುದು ಹನ್ನೆರಡು ರೂಪಾಯಿಯ ಬಿಳಿಯ ಪ್ರಿಂಟ್
ಸೀರೆ. ಹಸುರು ಬಣ್ಣದ ರವಕೆ ಕಣವೊಂದು ಆ ಸೀರೆಯೊಳಗಿತ್ತು.
ಅಷ್ಟಲ್ಲದೆ ಬೇರೆ ಆರು ರವಕೆ ಕಣಗಳಿದ್ದುವು. ಆ ಕಣಗಳನ್ನೆತ್ತಿ ತುಂಗಮ್ಮ,
ಮೇಜಿನ ಮೇಲಿರಿಸಿದಳು.
"ಇದರಲ್ಲೊಂದು ನಿಮಗೆ ದೊಡಮ್ಮ."
"ನನಗೆ!"
ದೊಡ್ಡಮ್ಮ ನಿರಾಕರಿಸುವರೆಂದು ತುಂಗಮ್ಮನ ಮುಖ ಕಪ್ಪಿಟ್ಟಿತು.
ಆದರೊಂದು ಮುಗುಳು ನಗು ಮೂಡಿತು ದೊಡ್ಡಮ್ಮನ ತುಟಿಗಳ
ಮೇಲೆ
"ನಂಗ್ಯಾಕಮ್ಮ. ಕೊಂಡ್ಕೊಂಡು ಬಂದೆ?"
ಮಗಳ ಬದಲು ತಂದೆ ಉತ್ತರವಿತ್ತರು:
"ಅಗಾಗ್ಗೆ ಗುರುಕಾಣಿಕೆ ಕೊಡೋದೊಂತ ಇಲ್ವೆ?"
"ಓ!...ಈಗ ಅಂಥ ಕಾಣಿಕೆಗೆ ಲಂಚ ಅಂತಾರೆ."
ದೊಡ್ಡಮ್ಮ ಬೇಡವೆಂದರೆ ಅಳಲು ಸಿದ್ಧವಾಗಿದ್ದ ತುಂಗಮ್ಮ ಆಗ್ರಹದ
ಧ್ವನಿಯಲ್ಲಿ ಹೇಳಿದಳು:
"ನೀವು ತಗೋಬೇಕು ದೊಡಮ್ಮ."
"ಹೂನಮ್ಮ...ಉಳಿದಿರೋದು?"