ಪುಟ:Abhaya.pdf/೧೯೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

೧೯೦ ಅಭಯ

ಕ್ಷಣಕಾಲ, ತಮ್ಮ ಸುತ್ತುಮುತ್ತೆಲ್ಲವೂ ಬರಿದಾದಂತೆ ಸರಸಮ್ಮನಿಗೆ ತೋರಿತು.

ತಂದೆ ಮಗಳನ್ನುದ್ದೇಶಿಸಿ ಕೇಳಿದರು:

"ಆಗ್ದೆ ಮಗೂ?ರಾತ್ರೆ ಗಾಡೀನೇ ಮೇಲು ಅಲ್ವಾ?"

"ಹೂಂ ಅಣ್ಣ. ಹನ್ನೆರಡು ಗಂಟೆ ಹೊತ್ತಿಗೆಲ್ಲಾ ಮನೆ ಸೇರ್ತೀರಾ."

ಸರಸಮ್ಮ ತಮ್ಮ ಬೆಪ್ಪುತನ ಕಂಡು ತಾವೇ ನಕ್ಕರು. ರಾತ್ರೆಯ ಗಾಡಿಗೆ ಹೋಗುವವರ ತಂದೆ ಮತ್ತು ಆ ಹುಡುಗ-ಅವರಿಬ್ಬರೇ.

ತುಂಗಮ್ಮನ ತಂದೆ ಕೋಟಿನ ಜೇಬಿನಿಂದ ಚರ್ಮದ ಪಾಕೀಟು ತೆಗೆದು ಅದರೊಳಗಿದ್ದ ನೋಟುಗಳನ್ನೆತ್ತಿಕೊಂಡರು. ಹತ್ತರ ಐದು ನೋಟುಗಳಿದ್ದುವು, ಐದು ರೂಪಾಯಿನದೊಂದು ಬಿಡಿ ನೋಟಿತ್ತು. ಹತ್ತರ ಐದು ನೋಟುಗಳನ್ನೂ ಅವರು ಸರಸಮ್ಮನ ಮೇಜಿನ ಮೇಲಿರಿಸಿದರು.

ಹಣವನ್ನೆಂದೂ ಬೇಡವೆನ್ನುವವರಲ್ಲ ಆ ದೊಡ್ಡಮ್ಮ. ಅಭಯಧಾಮ ಉಸಿರಾಡುವುದಕ್ಕೂ ಅಗತ್ಯವಿತ್ತು ಹಣ.

"ಇದಿಷ್ಟು ಅಭಯಧಾಮಕ್ಕೆ. ಬಡವನ ಕಾಣಿಕೆ."

ಯಾವುದೋ ಲೋಕದ ದೃಶ್ಯಗಳೆಂಬಂತೆ ತುಂಗಮ್ಮನ ತಮ್ಮ ಅಕ್ಕನ ಬಳಿಯಲ್ಲೆ ನಿಂತು ನೋಡುತ್ತಲಿದ್ದ. ತಂದೆಯ ಔದಾರ್ಯ ಕಂಡು ತುಂಗಮ್ಮನಿಗೆ ಸಮಾಧಾನವೆನಿಸಿತು. ತಾನು, ಕಡುಬಡವರ ಹೊಟ್ಟೆಯಲ್ಲಿ ಹುಟ್ಟಿದ ಅನಾಥ ಶಿಶುವೇನೂ ಅಲ್ಲ, ಅಲ್ಲವೆ?...ಆದರೆ, ಇಷ್ಟು ಹಣವೆಲ್ಲಿಂದ ಬಂತು ತಂದೆಗೆ? ನೂರು ರೂಪಾಯಿಯಷ್ಟಾದರೂ ಆತ ಸಾಲ ಮಾಡಿರಲೇ ಬೇಕು.

"ಆಗಲಿ. ಇದೊಂದನ್ನ ಬೇಡ ಅನ್ನೋ ಹಾಗೆ ಇಲ್ಲ."

ಸರಸಮ್ಮ ಕುರ್ಚಿಯ ಮೇಲೆ ಕುಳಿತು ಡ್ರಾಯರಿನಿಂದ ರಶೀತಿ ಪುಸ್ತಕವನ್ನೆತ್ತಿಕೊಂಡು ಬರೆದರು; ಬರೆದು, ಹರಿದುಕೊಟ್ಟರು.

ಅವರಿಗನ್ನಿಸಿತು:

ತುಂಗಮ್ಮನಿಗಾಗಿ ತಂದ ವಿಶೇಷ ಔಷಧಿಗೆಂದು ಮೂವತ್ತು ರೂಪಾಯಿ ಕೈಯಿಂದ ಹಾಕಿದ್ದೆ. ಅಷ್ಟನ್ನೂ ಈ ಹಣದಿಂದ ಎತ್ತಿಕೊಂಡು ಬಿಡಲೆ?....ಅದರಲ್ಲಿ ತಪ್ಪೇನು?