“ಇನ್ನು ಬದುಕಿರೋವಷ್ಟು ಕಾಲವೂ ಕಣ್ಣೀರಿನ ಅನ್ನವೇ ನನ್ನ ಪಾಲಿಗಿರತ್ತೆ ಅ೦ತಿದ್ದೆ. ನೀವು ಅದನ್ನು ಸುಳ್ಳಾಗಿ ಮಾಡಿದಿರಿ. ಇನ್ನು ಸತ್ತರೂ ಸರಿಯೆ, ಅಂದ್ಕೊಂಡಿದ್ದೆ. ಸಾಯೋ ಬದಲು, ಇನ್ನೂ ಒ೦ದಷ್ಟು ದಿವಸ ನಾನು ಬದುಕಿರೋ ಹಾಗೆ ಮಾಡಿದಿರಿ....”
ಹೆತ್ತ ಒಡಲು, ಆ ಭಾವನೆಗಳು ಸರಸಮ್ಮನಿಗೆ ಅರ್ಥವಾಗುತಿದ್ದುವು. ಆದರೂ ಆಕೆ ಅ೦ದರು :
“ಹಾಗೆಲ್ಲ ನೀವು ಹೇಳಬಾರದು! ಅದೆಲ್ಲ ಮನುಷ್ಯನ ಅಧೀನವೆ?”
"ನಾನು ಈ ಆರೆ೦ಟು ತಿ೦ಗಳು ಏನೇನು ಅನುಭವಿಸಿದೀನಿ ಅ೦ತ ನಿಮಗೆ ಗೊತ್ತಾದರೆ–....”
ತುಂಗಮ್ಮ ಒಮ್ಮೆಲೆ ಸೆರಗಿನಿಂದ ಮುಖ ಮುಚ್ಚಿಕೊಂಡು ಬಿಕ್ಕಿ ಬಿಕ್ಕಿ ಅತ್ತಳು. ತನ್ನ ಅರಿವಿಗೆ ನಿಲುಕದ ಏನೇನೋ ಮಾತುಗಳು ಬರುತಿದುದನ್ನು ಕಂಡು, ಏನೂ ಅರ್ಥವಾಗದವನಂತೆ ಹಾಗೆಯೇ ನಿಂತಿದ್ದ ತುಂಗಮ್ಮನ ತಮ್ಮ ಗಾಬರಿಯಾದ.
“ಅಕ್ಕಾ!"
ಆದರೆ ಅಳುತಿದ್ದುದು ಆಕೆಯೊಬ್ಬಳೇ ಅಲ್ಲ. ತಂದೆಯ ಕಣ್ಣುಗಳಿಂದಲೂ ಹನಿಗಳು ತೊಟ್ಟಿಕ್ಕುತಿದ್ದುವು.
“ಅಣ್ಣ!"
ತಂದೆ, ಕಿಟಕಿಯಿ೦ದ ಹೊರ ನೋಡಿದರು. ಅವರ ಕೈ ಮಗನ ಮುಂಗುರುಳು ನೇವರಿಸಿತು. ಭಾವನೆಗಳನ್ನು ಅವರು ಹತೋಟಿಗೆ ತಂದುಕೊಂಡರು....ತುಂಗಮ್ಮನೂ ಕಣ್ಣೊತ್ತಿಕೊಂಡು ಸರಾಗವಾಗಿ ಉಸಿರಾಡ ತೊಡಗಿದಳು.
....ಕರಿಯ ಮೋಡವೊ೦ದು ಮುಖತೋರಿಸಿ, ಎರಡು ಹನಿಯುದುರಿಸಿ, ಮತ್ತೆ ಗಾಳಿಯಲ್ಲಿ ತೇಲಿ ಹೋಯಿತು....
ಅದೆಷ್ಟು ಹೊತ್ತು ಬಾಗಿಲಿನಾಚೆ ಮರೆಯಲ್ಲಿ ನಿಂತಿದ್ದಳೊ–ಜಲಜ ಒಳ ಬಂದಳು.
ತುಂಗಮ್ಮನೆಂದಳು ಆಕೆಯನ್ನು ತೋರಿಸುತ್ತ:
"ಇವಳೇ ಅಣ್ಣ ಜಲಜ."
ಪುಟ:Abhaya.pdf/೧೯೭
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೧೯೨
ಅಭಯ
