ಪುಟ:Abhaya.pdf/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ೨೧೭

ಕೇಳಿ ನೋಡಿ ಬೇಸತ್ತ ಸರಸಮ್ಮ , ತಾನಿನ್ನು ಉಣ್ಣುವುದಿಲ್ಲವೆಂದು ಹೆಟ ಹಿಡಿದು ಉಪವಾಸಕುಳಿತರು ಒಬ್ಬಳ ಹೊರತು ಉಳಿದವರು ಯಾರೂ ಸರಸಮ್ಮನ ಬೆದರಿಕೆಯನ್ನು ಗಮನಿಸಲೇ ಇಲ್ಲ ತಮ್ಮಷ್ಟಕ್ಕೆ ನಗುತ್ತ ತಾವಿದ್ದು, ಊಟಮಾಡಿ, ನಿದ್ದೆ ಹೋದರು. ಆ ಒಬ್ಬಳು ಹುಡುಗಿ ಮಾತ್ರ ಬಂದು ಸರಸಮ್ಮನೆದುರು ಅಳುಮೋರೆ ಮಾಡಿ ಅಂದಳು :

“ನೀವು ಊಟಕ್ಕೇಳಿ ದೊಡ್ಡಮ್ಮ ಅವರೆಲ್ಲಾ ಕೆಟ್ಟೋರು ಕದ್ದ ಗಡಿಯಾರ ಸಿಕ್ಕಿಯೇ ಸಿಗತ್ತೆ, ನೀವು ಊಟಕ್ಕೇಳಿ."

ಸರಸಮ್ಮನ ಹೃದಯ ಬಿರಿದು ಕಣ್ಣುಗಳು ಕಂಬನಿದುಂಬಿದುವು.

ಬಲು ಪ್ರಯಾಸದಿಂದ ಆಕೆ ದುಃಖತಡೆದುಕೊಂಡು ಊಟಕ್ಕೆಂದು ಎದ್ದರು.

ಆದರೆ, ತಾವು ಉಣ್ಣುವುದಿಲ್ಲವೆಂದು. ಸಂಜೆಯೇ ಆಕೆ ಹೇಳಿದ್ದ ರಲ್ಲವೆ? ಆ ಕಾರಣದಿಂದ ಆಕೆಗಾಗಿ ಹುಡುಗಿಯರು ಏನನ್ನೂ ಉಳಿಸಿ ರಲಿಲ್ಲ! ಸರಸಮ್ಮ ತಮ್ಮ ಕೊಠಡಿಗೆ ಬಂದು, ಧಡಾರನೆ ಬಾಗಿಲು ಹಾಕಿ, ಹಾಸಿಗೆಯ ಮೇಲುರುಳಿಕೊಂಡರು. ಬಿಸಿಯಾದ ಕಂಬನಿಯಿಂದ ತಲೆ ದಿಂಬು ತೋಯ್ದಿತು

ಮರುದಿನ ಬೆಳಿಗ್ಗೆ, ಅಡುಗೆ ಸಾಮಾನು ಕೊಡದೆ ಆ ಹುಡುಗಿಯ ರೆಲ್ಲಾ ಉಪವಾಸವಿರುವಂತೆ ಮಾಡಬೇಕೆಂದು ಸರಸಮ್ಮನಿಗೆ ತೋಚಿತು. ಕ್ಷಣಕಾಲ ಹಾಗೆಯೇ ಯೋಚಿಸಿ, ಅಮೇಲೆ, “ಹಾಳಾಗಿ ಹೋಗಲಿ" ಎಂದು ಸುಮ್ಮನಾದರು

ಆಗ ನಡೆದುದಿಷ್ಟು. ಒಬ್ಬ ಹುಡುಗಿಯನ್ನು ನೋಡಲು ಆಕೆಯ ತಾಯಿ ಪ್ರತಿವಾರವೂ ಬರುತಿದ್ದಳು. ಗಡಿಯಾರ ಕಳವಾದ ಸಂಜೆಯೂ ಬಂದಿದ್ದಳಾಕೆ. ಆಗ ತಾನು ಸಂಪಾದಿಸಿದ್ದನ್ನು ಮಗಳು ತಾಯಿಗೆ ಕೊಟ್ಟಿ ದ್ವಳು. ಆ ತಾಯಿಯೋ--ಕಳವಿನ ವಸ್ತುವನ್ನು ಮನೆಯಲ್ಲಿರಿಸಿಕೊಳ್ಳು ವಷ್ಟು ಮೂರ್ಖಳಾಗಿರಲಿಲ್ಲ.

ಹೀಗೆ, ನಡೆದುದೇನೆಂದು ತಿಳಿದರೂ ಸರಸಮ್ಮ ಏನೂ ಮಾಡಲಾರ ದರು.