ಅಭಯ ೨೨೧
ಬಹಳದಿನಗಳಿಂದ ಕೆಲವರ ಮನಸಿನೊಳಗೇ ಇದ್ದುದು ಆ ದಿನ ಕೃತಿಗಿಳಿಯಿತು. ಅಡುಗೆ ಮನೆಯ ಖಾರದ ಪುಡಿ, ಡಬ್ಬದಿಂದ ತೆಂಗಿನ ಚಿಪ್ಪಿಗೆ ಸ್ಥಳಾಂತರ ಹೊಂದಿತು. ಒಳನಸಂಚಿನ ನಾಯಕತ್ವ ವಹಿಸಿದ್ದ ನಾಲ್ವರು ಹುಡುಗಿಯರೂ ವಿಷಯವನ್ನೆಲ್ಲ ರಹಸ್ಯವಾಗಿಯೆ ಇರಿಸಿದರು.
ಅಭಯಧಾಮಕ್ಕೆ ಹೊಸಬರಾಗಿದ್ದ ಜಲಜ--ಲಲಿತೆಯರಿಗೆ ಅದು ತಿಳಿಯಲಿಲ್ಲ.
ಆದರೆ ಒಬ್ಬಳಿಗೆ ಸಂದೇಹ ಬಂತು ಆಕೆ, ಮೂಗಿ-ಕಲ್ಯಾಣಿ.
ಬಾಗಿಲಬಳಿ ಹೂವಿನ ಗಿಡದಕೆಳಗೆ ಇರಿಸಿದ್ದ ಖಾರದಪುಡಿಯನ್ನು ಅವಳು ನೋಡಿ ಬಂದಳು ಬಂದವಳೇ ಕಾರಸ್ಥಾನಕ್ಕೆ ಸೇರಿದ್ದ ಒಬ್ಬಳು ಹುಡುಗಿಯನ್ನೇ ಸನ್ನೆಯ ಮೂಲಕ “ಅದು ಯಾಕೆ?' ಎಂದು ಕೇಳಿದಳು. ಉತ್ತರಬರಲಿಲ್ಲ. ಬದಲು 'ಬಾಯ್ಕುಚ್ಚು! ಇಲ್ದೇ ಹೋದರೆ ಚಚ್ಚಿಹಾಕ್ತೀವಿ!' ಎಂಬ ಗದರಿಕೆ ಕಲ್ಯಾಣಿಯ ಭಾಷೆಯಲ್ಲೇ ಬಂತು.
ಮಂಕುಕವಿದ ಹಾಗಾಯಿತು ಕಲ್ಯಾಣಿಗೆ. ಬಾಯಿಯಂತೂ ಮುಚ್ಚಿಯೇ ಇತ್ತಲ್ಲವೆ? ಆದರೂ, ಮನಸ್ಸು ಕೆಲಸ ಮಾಡಿತು. ಕೂಡಿಸಿ ಕಳೆದು ಭಾಗಿಸಿ ಗುಣಿಸಿತು ಖಾರದ ಪುಡಿ ಯಾಕಿರಬಹುದು, ಯಾಕೆ? ಯಾಕೆ ಎಂಬುದು ಮೊದಲು ಮಸಕಾಗಿ ಬಳಿಕ ಸ್ಪಷ್ಟವಾಗಿ ಹೊಳೆದಾಗ, ಕಲ್ಯಾಣಿಯ ಮೈ ಬೆವತು ಹೋಯಿತು ಶರೀರ ಕಂಪಿಸಿತು ಯಾರಿಗೂ ಏನನ್ನೂ ಹೇಳಲಾರದೆ ಭಯದಿಂದ ತತ್ತರಿಸುತ್ತ ಆಕೆ, ದೊಡ್ಡಮ್ಮನ ಆಫೀಸು ಕೊಠಡಿಯಲ್ಲೆ ಗೋಡೆಗೊರಗಿ ಮೂಲೆಯಲ್ಲಿ ಕುಳಿತಳು
ಸರಸಮ್ಮ ಬರುವ ಹೊತ್ತಾದಂತೆ ಬಂಡಾಯಗಾರರೂ ಮುಳ್ಳಿನ ಮೇಲೆ ನಿಂತವರ ಹಾಗೆ ವರ್ತಿಸಿದರು. ಕಲ್ಯಾಣಿ ಸುಮ್ಮನಿದ್ದುದನ್ನು ಕಂಡಂತೂ ಅವರ ಮನಸ್ಸು ನಿಶ್ಚಿಂತವಾಯಿತು
ದೊಡ್ಡಮ್ಮ ಬೀದಿಯಿಂದ ಅಂಗಳಕ್ಕಿಳಿದಾಗ ಮಬ್ಬುಗತ್ತಲು ಕವಿಯತೊಡಗಿತ್ತು. ಒಳಗೆ ದೀಪ ಹಾಕಿರಲಿಲ್ಲ ಇನ್ನೂ. ನಾಲ್ವರು ಹುಡುಗಿಯರಷ್ಟೆ, ಒಬ್ಬೊಬ್ಬರೂ ಒಂದೊಂದು ಹಿಡಿ ಖಾರದ ಪುಡಿಯೊಡನೆ ಬಾಗಿಲ ಬಳಿ ನಿಂತಿದ್ದರು.
ಸರಸಮ್ಮ ಹೊರಗಿನಿಂದ ಬಾಗಿಲಿನತ್ತ ಬರತೊಡಗಿದರು.