ಪುಟ:Abhaya.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೨೨ ಅಭಯ

ಇನ್ನೇನು--ಕಾರಸ್ಥಾನ ಯಶಸ್ವಿಯಾಗಬೇಕು, ಅಷ್ಟರಲ್ಲೆ ಮೂಕಿ ಚಿಟ್ಟನೆ ಚೀರಿದಳು ವಿಚಿತ್ರವಾಗಿ ವಿಕಾರವಾಗಿ ಕೂಗಿಕೊಂಡಳು. ಹುಡುಗಿಯರೆಲ್ಲ ಕೊಠಡಿಯ ಬಳಿಗೆ ಬಾಗಿಲ ಬಳಿಗೆ ಧಾವಿಸಿ ಬರುವುದಕ್ಕೂ ಗಾಬರಿಗೊಂಡು ಸರಸಮ್ಮ ಒಳ ಬರುವುದಕ್ಕೂ ಸರಿಹೋಯಿತು.

ಆ ನಾಲ್ವರು ಹುಡುಗಿಯರು ನುಸುಳಿಕೊಂಡು ಬಚ್ಚಲುಮನೆಗೆ ಓಡಿದುದನ್ನು ಯಾರೂ ಗಮನಿಸಲಿಲ್ಲ.

ಕಲ್ಯಾಣಿ ದೊಡ್ಡಮ್ಮನನ್ನು ಅಫ್ಸಿಕೊಂಡು ಮಡಿಲಲ್ಲಿ ಮುಖವಿಟ್ಟು ನರಳಿದಳು. ಮಾತು ಬಾರದೆ ಮೂಕ ಪಶುವಿನ ರೋದನ...

ಇದೇನು ಕಾಹಿಲೆಯೋ -ಎಂದು ಹೆದರಿದರು ಸರಸಮ್ಮ.

ಕಲ್ಯಾಣಿಯನ್ನು ಸಂತೈಸಲು ಅವರಿಗೆ ಬಹಳ ಹೊತ್ತು ಹಿಡಿಯಿತು. ಶಾಂತಳಾದ ಮೇಲೂ ಆಕೆ ಏನನ್ನೂ ಹೇಳಲಿಲ್ಲ; ಯಾರನ್ನೂ ಬೊಟ್ಟು ಮಾಡಿ ತೋರಿಸಲಿಲ್ಲ.

ಆಮೇಲೆ ಯಾರೋ ಒಬ್ಬರು ಉದ್ಯಾನದ ಮೂಲೆಯಲ್ಲಿದ್ದ ತೆಂಗಿನ ಚಿಪ್ಪನ್ನೂ ಅದರೊಳಗೆ ಮತ್ತೂ ಉಳಿದಿದ್ದ ಖಾರದ ಪುಡಿಯನ್ನೂ ಕಂಡರು. ಸುದ್ದಿ ಹಬ್ಬಿತು ಎಲ್ಲರಿಗೂ ಅರ್ಥವಾಯಿತು.

ಅಪರಾಧಿಗಳು ಯಾರೆಂದು ಕಂಡುಹಿಡಿಯುವುದು ಕಷ್ಟವಾಗದೆ ಇದ್ದರೂ ಆಗ ಯಾರೂ ಮಾತನಾಡಲಿಲ್ಲ.

ಆ ರಾತ್ರೆ ಮಲಗಿದಾಗ ಸರಸಮ್ಮನ ಮೈ ಅವರಿಗೆ ಅರಿಯದಂತೆಯೇ ಬೆವತುಕೊಂಡಿತ್ತು.

ಈಗ ಈ ಕತೆ ಕೇಳಿ ಬೆವತುದು ತುಂಗಮ್ಮನ ಮೈ. ಎಂತಹ ಗಂಡಾಂತರದಿಂದ ಪಾರಾಗಿದ್ದರು ದೊಡ್ಡಮ್ಮ! ಅದು ಅಷ್ಟಾಗಿ ಹಳೆಯ ಕಥೆಯೂ ಅಲ್ಲ ಇತ್ತೀಚೆಗೆ--ನಾಲ್ಡು ವರ್ಷಗಳ ಹಿಂದೆ--ನಡೆದುದು.

“ಆ ಹುಡುಗಿಯರಲ್ಲಿ ಇಬ್ಬರು ನರ್ಸ್‌ ಶಿಕ್ಷಣಕ್ಕೆ ಹೋದ್ರು. ಉಳಿದ ವರೂ ಒಳ್ಳೆಯವರಾದ್ರು ಬಹಳ ದಿನಗಳಾದ್ಮೇಲೆ ಅವರೇ ಬಂದು ಅತ್ತು ತಪ್ಪೊಪ್ಪಿಕೊಂಡ್ರು. ಅದಕ್ಕೆ ಕಾರಣ--ಉಳಿದ ಹುಡುಗೀರು ಅವರಿಗೆ ಕೊಟ್ಟ ಕೀಟಲೆ."