ಪುಟ:Abhaya.pdf/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೨೪

ಅಭಯ

ಮನೆಯೊಂದರಲ್ಲಿ ಒಂದೇ ಒಂದಾಗಿ ಉರಿಯುತ್ತಿದ್ದ ದೀಪ ಆರಿತು.
ಮನೆಯೊಡತಿಯೋ ಒಡೆಯನೋ ಅದನ್ನು ಆರಿಸಿರಬೇಕು.... ಕತ್ತಲು....
ಕೊಠಡಿಯೊಳಗೆ ಉರಿಯುತ್ತಿದ್ದ ವಿದ್ಯುದ್ದೀಪದ ಬೆಳಕಿನಲ್ಲಿ ತುಂಗಮ್ಮ
ಛಾವಣಿಯತ್ತ ದೃಷ್ಟಿ ಹರಿಸಿದಳು. ಆ ಮರದ ತೋಪು, ಮೊಳೆ....
ನಗು ಬಂತು ಆಕೆಗೆ.
“ಅದೇನೆ ?”
ತುಂಗಮ್ಮ, 'ಏನೂ ಇಲ್ಲ' ಎನ್ನಲಿಲ್ಲ. ಅವಳೆಂದಳು:
“ನಾನು ಇಲ್ಲಿಗೆ ಬಂದಾಗ, ಇಲ್ಲೊಂದು ಹೆಣ್ಣು ಗುಬ್ಬಚ್ಚಿ ಇರ್‍ತಿತ್ತು
ದೊಡ್ಡಮ್ಮ. ಓ ಅಲ್ಲಿ ಕೂತು ನಿದ್ದೆ ಹೋಗ್ತಿತ್ತು-ಆ ಮೊಳೇ ಮೇಲೆ ”
“ಪರವಾಗಿಲ್ಲ. ಅದನ್ನೂ ನೋಡ್ಬಿಟ್ಟಿದೀಯಾ!"
“ಈಗ ಅಲ್ಲಿ ಗುಬ್ಬಚ್ಚಿಯಿಲ್ಲ.”
“ಹೌದು, ತನ್ನದೇ ಗೂಡು ಸಿದ್ಧವಾಯ್ತು, ಹೊರಟ್ಹೋಯ್ತು"
ಎಲ್ಲರೂ ಅಷ್ಟೆ- ಎಂದೂ ಹೇಳಬೇಕೆಂದಿದ್ದರು ಸರಸಮ್ಮ. ಆದರೆ
ನಾಲಿಗೆ ಬಿಗಿ ಹಿಡಿದರು ಅವರು-ಸರಸಮ್ಮ ಮತ್ತು ತುಂಗಮ್ಮ-
ಹಾಗಿರಲಿಲ್ಲ ಅಲ್ಲವೆ ? ಅವರಿಗೆ ಅಭಯಧಾಮವೇ ಗೂಡು ಆಗಿತ್ತಲ್ಲವೆ ?
....ತುಂಗಮ್ಮ ಕೊಠಡಿಯಿಂದ ಹೊರಬಿದ್ದು ಬಚ್ಚಲು ಮನೆಗೆ
ಹೋಗಿ ಬಂದಳು. ತಾನು ಪುನರ್ಜನ್ಮ ಪಡೆದಿದ್ದ ಕೊಠಡಿಯ ಮುಂದೆ
ಜಲಜ ಮಲಗಿದ್ದಳು ಅವಳ ಪಕ್ಕದಲ್ಲಿ ತನ್ನ ಚಾಪೆಯೂ ಸಿದ್ಧವಾಗಿತ್ತು,
ಎಂದಿನಂತೆ.ತನಗಾಗಿ ಜಲಜೆ ಹಾಸಿದ್ದಳು.
ನಿದ್ದೆ ಬಂದಿದ್ದ ಜಲಜೆಯನ್ನು ಎಬ್ಬಿಸಬಾರದೆಂದು ತುಂಗಮ್ಮ
ಚಾಪೆಯ ಮೇಲೆ ಅಡ್ಡಾದಳು.
“ಇಷ್ಟು ಹೊತ್ತಾಯ್ತೆ ಟೀಚ ?”
ಜಲಜೆಯ ಸ್ವರ. ನಿದ್ದೆ ಹೋಗಿರಲಿಲ್ಲ ಕಳ್ಳಿ ! ಆಡಿದುದೂ ಎಂಥ
ಮಾತು !
“ಏನಂದೆ ?"
“ಮೇಟ್ರನ್ ಜತೇಲಿ ಮಾತುಕತೆ ಇಷ್ಟು ಹೊತ್ತಾಯ್ತೆ ಟೀಚ-
ಅಂತ ಕೇಳ್ದೆ.”