ಪುಟ:Abhaya.pdf/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೫ ಬೆಳಿಗ್ಗೆ ಎದ್ದಾಗ ತುಂಗಮ್ಮನಿಗೆ ಉಪಾಧ್ಯಾಯವೃತ್ತಿಯಲ್ಲಿದ್ದ ತನ್ನ ತಂದೆಯ ನೆನಪಾಯಿತು. ಹಿಂದೆ ತನಗೂ ಇತ್ತೀಚೆಗೆ ತನ್ನ ತಮ್ಮನಿಗೂ ಮನೆಯಲ್ಲಿ ಅವರು ಪಾಠ ಹೇಳಿಕೊಡುತ್ತಿದ್ದ ಚಿತ್ರಗಳು ಕಣ್ಣಿಗೆ ಕಟ್ಟಿದುವು. ಹಾಗೆಯೇ ಮೆಚ್ಚುಗೆಯ ತನ್ನ ಅಧ್ಯಾಪಕರೊಬ್ಬರು ತರಗತಿಯಲ್ಲಿ ಪಾಠ ಹೇಳುತಿದ್ದ ಕ್ರಮ....

ಬೆಳಕು ಮೆಲ್ಲ ಮೆಲ್ಲನೆ ಹರಿಯುತ್ತಲಿತ್ತು

ತುಂಗಮ್ಮ ಚಾವೆಯ ಮೇಲೆಯೇ ಕುಳಿತು, ತಾನು ತರಗತಿಯಲ್ಲಿ, ಹುಡುಗಿಯರಿಗೆ ಪಾಠ ಹೇಳಿಕೊಡಬೇಕಾದ ಪರಿಸ್ಥಿತಿಯನ್ನು ಕುರಿತು ಚಿ೦ತಿಸಿದಳು.

ಒಮ್ಮೆಲೆ, ಈ ಉದ್ಯೋಗ ತನಗೆ ದೊರೆಯದಿದ್ದರೆ ಮೇಲಾಗುತಿತ್ತು ಎಂದು ಆಕೆಗೆ ಅನಿಸಿತು ಅವಾಯವನ್ನು ಅನಿವಾರ್‍ಯವೆಂದು ನಿರೀಕ್ಷಿಸುವವರ ಹಾಗೆ ತುಂಗಮ್ಮ ಮುಖಬಾಡಿಸಿಕೊಂಡು ಪ್ರಾತರ್ವಿಧಿಗಳತ್ತ ಗಮನ ಕೊಟ್ಟಳು.

ಆದರೆ ಅವಳು ಅನುಭವಿಸುತ್ತಿದ್ದ ಸಂಕಟ ಸರಸಮ್ಮನ ಸೂಕ್ಷ್ಮ ದೃಷ್ಟಿಗೆ ಬೀಳದಿರಲಿಲ್ಲ ತಮ್ಮ ಕೊಠಡಿಗೆ ತುಂಗಮನನ್ನು ಅವರು ಕರೆದರು.

" ಪಾಠ ಹೇಳ್ಕೊಡೋದು ನಿನ್ಕೈಲಿ ಆಗುತ್ತೋ ಇಲ್ಲ್ವೋಂತ ಭಯವೆ ತುಂಗ?”

ಮನಸ್ಸಿನ ಒಳಹೊಕ್ಕು ತಿಳಿಯುವ ಸಾಮರ್ಥ್ಯವಿತ್ತು ದೊಡ್ಡಮ್ಮನಿಗೆ. ಅವರಿಂದ ಏನನ್ನೂ ಬಚ್ಚಿಡುವ ಹಾಗಿರಲಿಲ್ಲ. ಅವರು ಸರಿಯಾಗಿಯೇ ಊಹಿಸಿದ್ದರು. ಆದರೆ ಅದು ನಿಜವೆಂದು ಒಪ್ಪಿಕೊಳ್ಳಲು ತುಂಗಮ್ಮ ನಾಚಿದಳು.