ಪುಟ:Abhaya.pdf/೨೪೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಆದರೆ ಹಾಗೆ ಅಳುತಿದ್ದಾಗಲೂ ಕನಕಲಕ್ಷಮ್ಮನ ಹೃದಯ ತುಂಬಿಬಂದಿತ್ತು. 'ಇನ್ನೆಷ್ಟು ದಿವಸ ಹೇಗೆ ಮಾಡೀರಾ ?' ಎಂಬ ಕೊಂಕು ಆಹ್ವಾನ ಮನಸ್ಸಿನಲ್ಲಿ ಮೂಡಿತು. 'ಆ ಮಹಾರಾಯ ಬಂದವನು ಎಲ್ಲಿಯಾದರೂ ಒಪ್ಪಿಕೊಳ್ಳದೇ ಹೋದರೆ-' ಎಂಬ ಭೀತಿಯೂ ಆಕೆಯನ್ನು ಕಾಡಿ ಎದೆ ಡವಡವನೆ ಹೊಡೆದುಕೊಂಡಿತು.

....ಮಾರನೆದಿನ ಭಾನುವಾರ ತರಗತಿಗಳಿರಲಿಲ್ಲ ಊಟವಾದಮೇಲೆ ಬಿಸಿಲಲ್ಲೆ ಸರಸಮ್ಮ ಕಾರ್ಯದರ್ಶಿನಿಯ ಮನೆಗೆ ಹೋದರು. ಅವರ ಸಹಾಯಿಕೆ ತುಂಗಮ್ಮ, ಬೀಗದಕೈ ಗೊಂಚಲನ್ನು ಮಡಿಲಲ್ಲಿಟ್ಟು ಅಭಯಧಾಮದ ರಕ್ಷಣೆಯ ಭಾರ ಹೊತ್ತಳು.

ಸರಸಮ್ಮ ಹಿಂತಿರುಗಿ ಬಂದಾಗ ಚೆನ್ನಾಗಿ ಕತ್ತಲಾಗಿತ್ತು. ಬರುತ್ತ ಹಾದಿಯಲ್ಲಿ, ಅಭಯಧಾಮದಲ್ಲಿ ಏನಾಗಿದೆಯೋ ಎಂಬ ಭಯ ಅವರನ್ನು ಕಾಡಿಸದೆ ಇರಲಿಲ್ಲ.

ಆದರೆ ಎಲ್ಲವೂ ಎಂದಿನಂತೆಯೇ ಇದ್ದುವು ಆ ಅಭಯಧಾಮದಲ್ಲಿ. ಅವರು ಒಳಕ್ಕೆ ಕಾಲಿಟ್ಟಾಗ ಭಜನೆ ನಡೆಯುತಿತ್ತು.

'ಹೋದ ಕೆಲಸವಾಯಿತೆ?' ಎಂದು ಕೇಳಬೇಕೆಂದು ತುಂಗಮ್ಮ ಯೋಚಿಸುತಿದ್ದಾಗಲೇ, ಕುಳ್ಳಿ ದಮಯಂತಿ ಏದುತ್ತ ಬಂದಳು.

"ದೊಡ್ಡಮ್ಮ ! ಕನಕ ಕೇಳಿದಾಳೆ, ದಿನ ನಿಶ್ಚಯವಾಯ್ತೆ ಅಂತ."

ಅದೆಲ್ಲ ದಮಯಂತಿಯದೇ ಸೃಷ್ಟನೆ ಎಂಬುದು ಸ್ಪಷ್ಟವಾಗಿತ್ತು. ನಗುವನ್ನು ತಡೆದಿಟ್ಟು ಕೋಪವನ್ನು ನಟಸುತ್ತಾ ಸರಸಮ್ಮ ಅಂದರು:

"ತಾಳು! ನಿಶ್ಚಯಿಸ್ತೀನಿ ನಿಮಗೆ! ಭಜನೆ ಆಗ್ತಿದ್ದಾಗ ಎದ್ದು ಓಡಿ ಬಂದ್ಯಾ? ಹೋಗು ವಾಪ್ಸು !"

ದಮಯಂತಿ ಜೋಲುಮುಖ ಹಾಕಿಕೊಂಡು ಮತ್ತೆ ಹಜಾರದತ್ತ ನಡೆಯ ಹೊರಟಳು. ಆದರೆ ಅಷ್ಟರಲ್ಲೆ ಮಂಗಳ ಹಾಡು ಆರಂಭವಾಯ್ತು.

"ನೋಡಿದಿರಾ ದೊಡ್ಡಮ್ಮ, ಭಜನೆ ಆಗೋಯ್ತು."

-ಎಂದಳು ದಮಯಂತಿ. ತಾನುಸೋಲಲಿಲ್ಲ ಎಂಬಧ್ವನಿಯಿತ್ತು ಆ ಮಾತಿನಲ್ಲಿ.

"ಹೂಂ. ಅದಕ್ಕೆ?"