ವಿಷಯಕ್ಕೆ ಹೋಗು

ಪುಟ:Abhaya.pdf/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೭೪
ಅಭಯ

ಮಗುವಿನಹಾಗೆ ನಿರ್ಮಲಮನಸಿನಿಂದ ಸರಸಮ್ಮ ತಲ್ಲೀನರಾದರು....ತಾವೂ ಕರಗಿ ಆ ಹಿಮದೊಡನೆ ಲೀನವಾದ ಹಾಗೆ ಅವರಿಗೆ ಅನಿಸುತಿತ್ತು.

ಅದೆಷ್ಟು ಹೊತ್ತು ಅವರು ಹಾಗೆ ನಿಂತರೊ !

ಗಂಟೆ ಬಾರಿಸಿ ಹುಡುಗಿಯರನ್ನು ಎಬ್ಬಿಸಬೇಕು. ಆದರೆ ಲೋಕವೇ ಮೈಮರೆತು ನಿದ್ದೆ ಹೋಗಿದ್ದಾಗ ಈ ಮಕ್ಕಳು ಮಾತ್ರ ಏಳಬೇಕೆನ್ನುವುದು ಸರಿಯೇ? ಅಭಯಧಾಮದ ನಿಷ್ಠುರ ನಿಯಮಗಳೂ ಈ ಘಳಿಗೆಯಲ್ಲಿ ಸ್ವಲ್ಪ ಹೊತ್ತು ಶಿಥಿಲವಾಗಬಾರದೇಕೆ ?

ಸರಸಮ್ಮ ಹೊರಬಂದು, ತುಂಗಮ್ಮ ಮಲಗಿದ್ದ ಜಾಗದತ್ತ ನಡೆದು, ಮೆಲ್ಲನೆ ಮೈ ಮುಟ್ಟಿ "ತುಂಗಾ!" ಎಂದು ಪಿಸುಧ್ವನಿಯಲ್ಲಿ ಉಸುರಿ, ಆಕೆಯನ್ನು ಎಬ್ಬಿಸಿದರು "ಬಾ"--ಎಂದು ಕೈಸನ್ನೆಯಿಂದ ಕರೆದರು. ಆಕೆಯೊಡನೆ, ಕರಿಕತ್ತಲು ನಸುಬೆಳಕುಗಳ ಸಂಗಮ ನಡೆದಿದ್ದ ತಮ್ಮ ಕೊಠಡಿಗೆ ಬಂದು, ತೆರೆದ ಕಿಟಕಿಯ ಬಳಿನಿಂತರು

"ನೋಡು ! ಮಂಜು ಹ್ಯಾಗೆ ಕವಿದಿದೆ!"

"ಹೌದಲ್ಲ ! ಅಯ್ಯ - ಎಷ್ಟು ಚೆನ್ನಾಗಿದೆ!"

"ಮಳೆಗಾಲ ಆಗೋಯ್ತು. ಇನ್ನು ಚಳಿಗಾಲ."

"ಹೌದು!"

ಬೆಳಗಾಗುತ್ತಲಿತ್ತು. ಅಲ್ಲಿ ಇಲ್ಲಿ ಯಾವುದೋ ವಸ್ತುವಿಗೆ ಜೀವ ಬಂದು ಸದ್ದಾಗುತಿತ್ತು- ನಿಸರ್ಗತಾಯಿ ಮೈ ಕುಲುಕಿದ ಹಾಗೆ.

ತನ್ಮಯತೆಯ ಆ ಮನೋಸ್ಥಿಯಲ್ಲಿ ಮಾತನಾಡುವ ಅಂಶಗಳೇ ಇರಲಿಲ್ಲ.

ಆರುಗಂಟೆಯೂ ದಾಟಿತೆಂದು ತಿಳಿದು ಸರಸಮ್ಮ ಮೆಲುಧ್ವನೆಯಲ್ಲಿ ಅಂದರು :

"ಘಂಟೆ ಬಾರಿಸ್ತೀಯಾ ತುಂಗ?"

"ಹೂಂ...."

ಘಂಟೆಯ ನಾದ ಅಲೆಯಲೆಯಾಗಿ ನಸುಕಿನ ನೀರವತೆಯಲ್ಲಿ ಬಲು ದೂರಕ್ಕೆ ತೇಲಿ ಹೋಯಿತು.

ಒಬ್ಬೊಬ್ಬರಾಗಿ ಹುಡುಗಿಯರು ಎದ್ದರು.