ಪುಟ:Abhaya.pdf/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೩೦೩

ಎರಡು ಕಪೋಲಗಳ ಮೇಲಿಂದಲೂ ಕಣ್ಣೀರಧಾರೆ ಹರಿದಿತ್ತು ಸೋಮಶೇಖರನ ದೃಷ್ಟಿಗಳನ್ನು ಸಂಧಿಸಿದಮೇಲೆ ತುಂಗಮ್ಮನ ದೃಷ್ಟಿ ಮತ್ತೆ ಹಾದಿಯಮೇಲೆ ನೆಟ್ಟಿತು. ಸೋಮಶೇಖರ ಅತಿ ಸಮೀಪದಲ್ಲೆ ನಡೆದ ಅವನ ಒಂದು ಕೈ ಆಕೆಯ ಅಂಗೈಯನ್ನು ಭದ್ರವಾಗಿ ಹಿಡಿದುಕೊಂಡು ಮೃದುವಾಗಿ ಅದುಮಿತು. ಎದುರುಗಡೆಯಿಂದ ಬರುತಿದ್ದ ಬಿ. ಟಿ. ಸಿ ಬಸ್ಸಿನ ಬೆಳಕು ತಮ್ಮ ಮೇಲೆ ಬಿದ್ದಾಗ ಮಾತ್ರ ಸೋಮಶೇಖರ ಆಕೆಯ ಕೈಯನ್ನು ಬಿಟ್ಟ. ಆಗ, ಯಾವುದೋ ಆಧಾರ ತಪ್ಪಿದಂತೆ ತುಂಗಮ್ಮನಿಗೆ ಅನಿಸಿತು. ಆಗ ತುಂಗಮ್ಮ ಏನನ್ನೂ ಯೋಚಿಸುತ್ತಿರಲಿಲ್ಲ. ಆವರೆಗೂ ಚಿಟ್ ಚಿಟ್ಟೆಂದು ಸಿಡಿಯುತಿದ್ದ ಮೆದುಳು ಶಾಂತವಾಯಿತು ಎದೆಗುಂಡಿಗೆ ಸದ್ದು ಕಡಿಮೆಮಾಡಿತು ಶಾಂತವಾದೊಂದು ಮಧುರವಾದೊಂದು ಶೂನ್ಯ ಆಕೆಯನ್ನು ಸುತ್ತುವರಿಯಿತು. ಆದರೆ ಹಾಗೆಯೇ ಸದಾಕಾಲವೂ ಇರುವುದು ಸಾಧ್ಯವಿರಲಿಲ್ಲ. ಮೆದುಳು ನಿದ್ದೆ ಹೋಗಿರಲಿಲ್ಲ ಮತ್ತೆ ಯೋಚನೆಗಳು... ಇದು ಸರಿಯೆ? ಹೀಗಾಗುವುದು ನ್ಯಾಯವೆ? ಸೋಮಶೇಖರನ ಕೈ ಹಿಡಿಯುವ ಅರ್ಹತೆ ತನಗುಂಟೆ? ತನ್ನ ಗತ ಜೀವನದ ಅರಿವಿಲ್ಲವೆ ಆತನಿಗೆ? ಈಗ ಹೀಗೆ ಹೇಳಿ, ನಾಳೆ ಎಲ್ಲವೂ ತಿಳಿದಾಗ ತಾನು ಅವಮಾನಕ್ಕೆ ಗುರಿಯಾಗಬೇಕೆ? ನಡೆದು ನಡೆದು ಅವರು ಅಭಯಧಾಮದ ಸಮೀಪಕ್ಕೆ ಬಂದಿದ್ದರು. ಸೋಮಶೇಖರ ಅಲ್ಲಿ ನಿಂತ. ತುಂಗಮ್ಮನೂ ನಿಂತಳು "ತುಂಗ, ನೀನು ಏನೂ ಹೇಳ್ಲೇ ಇಲ್ಲ." ಮಾತನಾಡದೆ ಇರುವುದು ತಪ್ಪೆಂದು ತಿಳಿದು, ಧೈರ್ಯ ತಂದುಕೊಂಡು, ತುಂಗಮ್ಮ ಅಂದಳು: "ಏನು ಹೇಳ್ಲಿ?" "ನನ್ನನ್ನು ಮದುವೆಯಾಗೋದು ನಿನಗೆ ಇಷ್ಟವೆ ಹೇಳು?" ಆಕೆಯ ಮನಸಿನೊಳಗೇ ಇದ್ದ ವಿಚಾರಗಳು ಅಂತೂ ಹೊರಗೆ ಬಂದುವು: