ಪುಟ:Abhaya.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವರು ನೂರು ಮಾರು ದೂರ ಹೋಗಿರಬಹುದು. ಹುಡುಗಿ ನಿಂತು

ಎಡಕ್ಕೆ ಕೈ ತೋರಿಸಿ ಹೇಳಿದಳು.

"ಅದೇ. ಅದೇ ಅಭಯಧಾಮ"

ಆ ಹುಡುಗಿ ಇನ್ನು ತನ್ನನ್ನು ಬಿಟ್ಟು ಹೋಗುವಳು, ತಾನಿನ್ನು ಒಬ್ಬಂಟಿಗಳಾಗುವೆ, ಎಂದು ತುಂಗಮ್ಮನಿಗೆ ದಿಗಿಲಾಯಿತು. ಆದರೂ ಆಕೆ ತಲೆಯೆತ್ತಿ, ಹುಡುಗಿ ಬೊಟ್ಟುಮಾಡಿದ್ದ ಕಡೆಗೆ ನೋಡಿದಳು. ಮೂರಾಳು ಎತ್ತರವಿದ್ದ ಚಚ್ಚೌಕದ ಗೋಡೆ. ಎದುರು ಭಾಗದಲ್ಲೊಂದು ವಿದ್ಯುದ್ದೀಪ ಬೆಳಕು ಬೀರುತ್ತಿತ್ತು. ಆದರೆ ಕೆಳಗೆ ಕಾಣಿಸಿಕೊಂಡಿತು, ಮುಚ್ಚಿದ್ದ ಕರಿದಾದ ದೊಡ್ಡ ಬಾಗಿಲೊಂದು. ಆ ಗೋಡೆಗಳ ಸುತ್ತಲೂ ಬಯಲು ಜಾಗ ಆ ಜಾಗದ ಸುತ್ತಲೂ ಸಣ್ಣ ಗೋಡೆ

"ನೋಡಿದಿರಾ? ಆ ದೀಪದ ಕೆಳಗೆ ಬೋರ್ಡಿದೆ. ಬರೆದಿದಾರೆ-

ಅಭಯಧಾಮ ಅಂತ."

-ತುಂಗಮ್ಮನನ್ನು ಉದ್ದೇಶಿಸಿ ಆ ಹುಡುಗಿ ಹೇಳಿದಳು ಹಾಗೆಂದು.

"ಹಾಂ," ಎಂದಳು ತುಂಗಮ್ಮ, "ಹೂಂ. ನೋಡ್ದೆ. ಹೋಗ್ತೀನಿ."

"ನಾನು ಬರ್ತೀನಿ ಹಾಗಾದರೆ."

"ಹೂನಮ್ಮ...."

ಏನು, ಯಾಕೆ ಗಳನ್ನು ಕೇಳಿ ತನ್ನನ್ನು ನೋಯಿಸಿರಲಿಲ್ಲ ಆ ಹುಡುಗಿ.

ಎಷ್ಟೊಂದು ಒಳ್ಳೆಯವಳು ! ಕತ್ತಲೆಯಲ್ಲಿ ಮರೆಯಾಗುತ್ತ ಸಾಗಿದ್ದ ಆಕೆಯನ್ನೆ ತುಂಗಮ್ಮ ಕ್ಷಣಕಾಲ ನೋಡಿದಳು

ಆ ಬಳಿಕ ಆ ಕಟ್ಟಡದತ್ತ ತುಂಗಮ್ಮನ ದೃಷ್ಟಿ ಹರಿಯಿತು.

ಎಷ್ಟು ನಿಶ್ಚಲವಾಗಿ ನೀರವವಾಗಿ ನಿಂತಿತ್ತು ಆ ಅಭಯಧಾಮ

ಅಂತೂ ತುಂಗಮ್ಮ ಅಲ್ಲಿಗೆ ಬಂದು ತಲುಪಿದ್ದಳು.

ಆಕೆ ಮೆಲ್ಲನೆ ನಡೆದು ಕಿರುಗೋಡೆಯ ಗೇಟನ್ನು ತೆರೆದಳು. ಅದು

ಸಪ್ಪಳ ಮಾಡಿ, ತುಂಗಮ್ಮ ಒಳ ಬರಲು ಅವಕಾಶವನಿತ್ತು, ಮತ್ತೆ ಮುಚ್ಚಿಕೊಂಡಿತು.

ಬಾಗಿಲನ್ನು ಸಮೀಪಿಸಿದಳು ತುಂಗಮ್ಮ.

ಅನಿಶ್ಚಯತೆಯ ಕೊನೆಯ ನಿಮಿಷ.