ಪುಟ:Abhaya.pdf/೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ಅಲ್ಲೆ ಒಂದು ಕಂಬಕ್ಕೊರಗಿ ನಿಶ್ಚಲಳಾಗಿ ನಿಂತಿದ್ದಳು ಒಬ್ಬ ಹುಡುಗಿ.

ಕ್ಷೀಣ ದೇಹ. ಮುಖದ ತುಂಬ ಸಿಡುಬಿನ ಕಲೆಗಳಿದ್ದುವು ದೃಷ್ಟಿ ಚಲಿಸುತ್ತಿರಲಿಲ್ಲ. ಆದರೆ ತುಟಗಳ ಮೇಲೆ ಮಾಟವಾದೊಂದು ನಗು ಮನೆ ಮಾಡಿತ್ತು.

ಆಕೆಯ ಬಳಿ ಸಮೀಪಿಸುತ್ತಲೆ ಜಲಜ ಮೃದುತನ ತುಂಬಿದ ಧ್ವನಿ

ಯಲ್ಲಿ ಕೇಳಿದಳು:

"ಮುಖ ತೊಳ್ಕೊಂಡ್ಯಾ ಸುಂದ್ರಾ?"

"ಊಂ ಕಣಕ್ಕಾ....ಯಾರು---ಜಲಜ್ನಾ? ಜರಾ ಬುಟ್ಬುಡ್ತಾ?"

"ಓ!" ಎಂದು ತುಂಟ ರಾಗವೆಳೆದಳು ಜಲಜ; "ಜರಾನ

ಓಡುಸ್ಬುಟ್ಟೆ!"

"ಭೇಷ್ ಕೆಲಸಮಾಡ್ದೆ. ಅಂಗಾರೆ ತಿಂಡಿ ಒತ್ಗೆ ಬತ್ತೀಯಾ?"

"ಇಲ್ಲಮ್ಮಾ ಇಲ್ಲ.... ಇನ್ನೂ ಒಂದಿವ್ಸ ಔಷ್ದಿ ತಗೋಬೇಕಂತೆ."

ಜಲಜ ತುಂಗಮ್ಮನನ್ನು ನೋಡಿ, ತನ್ನ ಕಣ್ಣುಗಳತ್ತ ಬೊಟ್ಟು

ಮಾಡಿ, ಅಲ್ಲಿ ನಿಂತಿದ್ದ ಹುಡುಗಿ ಕುರುಡಿ ಎಂದು ಸೂಚಿಸಿದಳು. ಆ ವಿಷಯ ತುಂಗಮ್ಮನಿಗೆ ಆಗಲೆ ಹೊಳೆದಿತ್ತು.

ತುಂಗಮ್ಮನ ಕೈಬಳೆಗಳ ಸಪ್ಪಳವಾಯಿತು.

"ಯಾರು? ಯಾರು ನಿಂತವ್ರೆ ನಿನ್ಜತೇಲಿ---ಪಾರೋತಿನಾ?"

"ಹೊಸಬ್ರು ಸುಂದರಾ. ನಿನ್ನೆ ಬಂದ್ರು. ತುಂಗಮ್ಮಾಂತ."

"ಆ! ಅಂಗಾ?"

ಕುರುಡಿಯ ಮುಖವಳಿ ಸಿಡುಬಿನ ಕಲೆಗಳು ಮತ್ತಷ್ಟು ವಿಕಾರ

ವಾದವು. ನೋಡಲು ಯತ್ನಿಸಿದಂತೆ ಕಣ್ಣಾಲಿಗಳು ಚಲಿಸಿದವು. ಆದರೆ ಆಕೆಗೇನಾದರೂ ಕಾಣಿಸುತಿತ್ತೆ? ಅದನ್ನು ಕಂಡ ತುಂಗಮ್ಮನ ಗಂಟಲಲ್ಲಿ ಉಗುಳು ಒತ್ತರಿಸಿ ಬಂತು.

ಏನಾದರೂ ಮಾತನಾಡೆಂದು ಜಲಜ ತುಂಗಮ್ಮನಿಗೆ ಸನ್ನೆ ಮಾಡಿ

ದಳು. ಏನು ಮಾತನಾಡಬೇಕು ಆಕೆ?

"ಚೆನ್ನಾಗಿದಿಯೇನಮ್ಮ?"

"ಯಾರು! ಯಾರು ಮಾತಾಡ್ದೋರು? ಅವರೇನಾ?