ಪುಟ:Abhaya.pdf/೮೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

"ಇಲ್ಲ ದೊಡ್ಡಮ್ಮ. ಈ ಐದು ತಿಂಗಳು ನಾನು ಈ ಊರಲ್ಲೇ ಇದ್ದೆ,

ಮಾವಳ್ಳೀಲಿ. ಇಲ್ಲಿಂದಲೇ ಬಂದೆ. ಅವ್ವನಿಗೆ ಗೊತ್ತಿಲ್ಲ. ಇನ್ಮೇಲೆ ಕಾಗದ ಬರೀ ಬೇಕು ದೊಡ್ಡಮ್ಮ."

"ಬರೆಯೋಣ, ಬರೆಯೋಣ."

"ನಮ್ಮಪ್ಪ ನೊಂದ್ಕೋತಾರೆ. ಅವರಿಗೆ ನಾನು ಈಗಾಗ್ಲೇ ಕೊಡ

ಬಾರದ ಹಿಂಸೆ ಕೊಟ್ಟಿದ್ದೀನಿ."

"......."

"ಆತ....ಆತ ಹೀಗ್ಮಾಡ್ತಾರೇಂತ ನನಗೆ ಗೊತ್ತಿರಲಿಲ್ಲ...."

ಕಿವಿಗೊಡುತ್ತಲಿದ್ದ ಸರಸಮ್ಮ ನಿಟ್ಟುಸಿರು ಬಿಟ್ಟರು. ಅದೇ ಮಾತನ್ನು

ಹಿಂದೆಯೂ ಕೆಲವು ಸಾರೆ ಕೇಳಿದ್ದರಾಕೆ.... 'ಆತ ಹೀಗ್ಮಾಡ್ತಾರೇಂತ.... ಗೊತ್ತಿರಲಿಲ್ಲ....'

...ತಡೆ ತಡೆಯುತ್ತ, ನಡುನಡುವೆ ಆಳುತ್ತ, ಸುಧಾರಿಸಿಕೊಳುತ್ತ,

ಅಲ್ಲಿಂದ ಇಲ್ಲಿಂದ ಅಷ್ಟಿಷ್ಟು ಆಯ್ದು ತುಂಗಮ್ಮ ತನ್ನ ಬಾಳಿನ ಕತೆ ಹೇಳಿದಳು. ಕೇಳುತ್ತ ಕೇಳುತ್ತ, ಒಂದಕ್ಕೊಂದು ಜೋಡಿಸಿ ಸರಿಪಡಿಸಿ ಅರ್ಥ ಮಾಡಿಕೊಂಡರು ಸರಸಮ್ಮ....

....ಆಕೆಯ ಬದುಕಿನ ಈ ಅದ್ಯಾಯದ ಆರಂಭವಾದುದು ನಾಲ್ಕು

ವರ್ಷಗಳ ಹಿಂದೆ, ಅಕ್ಕನ ಮದುವೆಯದಿನ. ಹದಿನಾಲ್ಕು ದಾಟಿದ್ದ ಹುಡುಗಿ ತುಂಗ ಆ ಸಂಭ್ರಮದಲ್ಲಿ ಲವಲವಿಕೆಯಿಂದ ಓಡಿಯಾಡುತ್ತಿದ್ದಳು. ಮೈಸೂರಿನಿಂದ ವರನ ದಿಬ್ಬಣ ಬಂದಿತ್ತು. ಆ ದಿಬ್ಬಣದಲ್ಲಿ ವರನ ಸಂಬಂಧಿಕರೊಬ್ಬರ ಸಂಸಾರವಿತ್ತು. ಆ ಸಂಸಾರದವಳಾಗಿದ್ದ ಹುಡುಗಿಯೊಬ್ಬಳು ತುಂಗನ ಗೆಳೆತನ ಸಂಪಾದಿಸಿಕೊಂಡಳು. ಬೃಂದಾವನ, ಚಾಮುಂಡಿಬೆಟ್ಟ, ಮೃಗಾಲಯ, ಅರಮನೆಗಳ ವರ್ಣನೆಯನ್ನು ಕೇಳುತ್ತ, ಆ ಸಮವಯಸ್ಕಳಿಗೆ ತುಂಗ ಮಾರು ಹೋದಳು.

ಅಕ್ಕನ ಮದುವೆಯ ಓಡಾಟದಲ್ಲಿ ಆ ದಿನ ತುಂಗಿಗೆ ಬಿಡುವಿರಲಿಲ್ಲ.

ಆದರೂ ಆಕೆ ಆಗೊಮ್ಮೆ ಈಗೊಮ್ಮೆ ಮೈಸೂರಿನ ಗೆಳತಿಯೊಡನೆ ಮಾತನಾಡದೆ ಇರುತ್ತಿರಲಿಲ್ಲ.