ವಿಷಯಕ್ಕೆ ಹೋಗು

ಪುಟ:Aramane.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಗೆವಂಚಿತರನ್ನು ನಗಿಸಲೋಸುಗ ಅಕ್ಕಪಕ್ಕದ ಗ್ರಾಮಗಳಿಂದ ಹಗಲು ಯೇಸಗಾರರು, ದೊಂಬರರು ನಾ ಮುಂದು, ತಾ ಮುಂದು ಅಂತ ಬಂದು ಚಿತ್ರಯಿಚಿತ್ರವಾಗಿ ವರ್ತನೆ ಮಾಡುತಲಿದ್ದರು. ಅಗೋಚರ ಸ್ಥಿತೀಲಿದ್ದ ಸಾಂಬವಿಯ ರುದಯ ಕರಗಿಸಲಕೆಂದು ಅಕ್ಕಪಕ್ಕದ ಗ್ರಾಮಗಳಿಂದ ಆಗಮನ ಮಾಡುತಲಿದ್ದ ಭಜನೆ ತಂಡಗಳಂತೂ ಲೆಕ್ಕಯಿರಲಿಲ್ಲ.. ದುರುಗಾ ಮುರುಗ್ಯೋರಂತೂ ತಮ ತಮ್ಮ ಹೆಗಲ ಮ್ಯಾಲ ಪಕ್ಕಾ ಹೆಣ್ದೇವತೆಗಳನ್ನು ಹೊತ್ತುಕೊಂಡು ಬಂದು ಜಗದಂಬೆಯ ನಾಮಾವಳಿಗಳನು ಬೀದಿಗುಂಟೆಲ್ಲ ಬಿತ್ತಿ ಬೆಳೆಯಲಾರಂಭಿ ಸಿದ್ದರು. ಲೆಕ್ಕವಿರದಷ್ಟು ಮಂದಿ ಮಂತ್ರವಾದಿಗಳು ತಮ್ಮ ತವರು ನೆಲೆಯಾದ ಹಾರಕ ಬಾವಿಯಿಂದ ನಾ ಮುಂದು, ತಾ ಮುಂದು ಅಂತ ಸದರಿ ಪಟ್ಟಣದೊಳಗ ಬೀಡು ಬಿಟ್ಟು ಕಾರ್ಯೋನ್ಮುಖರಾಗಿದ್ದರು.. ಅಂಥವರೆದುರು ವಂದಕ್ಕೆ ನಾಕರಷ್ಟು ದಕ್ಷಿಣೆಯಿಟ್ಟು ತಾಯಂದಿರು, ಹೆಂಡಂದಿರು ತಾಯಿತ, ಅಂತರ, ಮಂತ್ರಿಸಿದ ಲೋಬಾನ ಖರೀದಿಸದೆ ಯಿರಲಿಲ್ಲ.. ಖರೀದಿಸಿ ಅವರು ಹೇಳಿದಂಗೆ ಮಾಡದೆ ಯಿರಲಿಲ್ಲ.. ಯಲ್ಲಿ ನೋಡಿದರೂ ಹ್ರಾಂ ಹ್ರೀಂ ಹ್ರೂಂ ಮಂತ್ರಗಳೇ ಸಿವಸಿವಾ.. ಯಾರ ಸರೀರದ ಮ್ಯಾಲ ನೋಡಿದರೂ ತಾಯಿತ, ಅಂತರಗಳೇ ಸಿವಸಿವಾ.. ಯಾರ ಮನೇಲಿ ನೋಡಿದರೂ ಲೋಬಾನದ ಘಾಟು ಹೊಗೆ ತುಂಬಿ ಚೆಲ್ಲಾಡಲಕ ಹತ್ತಿತ್ತು ಸಿವನೇ.. ಯೇನು ಮಾಡಿದರೂ ವಂದು ಯೇರಿಕೆ ಆಗದ ಪರಿಣಾಮವಾಗಿ, ವಂದು ಯಿಳಿಕೆಯಾಗದ ಪರಿಣಾಮವಾಗಿ ಪಟ್ಟಣದೊಳಗ ತಾಯಂದಿರು ತಮ ತಮ್ಮ ಮೊಲೆಗಳನ್ನು ಹೀನಾಯ ರೀತಿಯಲ್ಲಿ ಗುದ್ದಿಕೊಳ್ಳತೊಡಗಿದರು ಸಿವನೇ, ತಮ ತಮ್ಮ ತಲೆಗೂದಲುಗಳನ್ನು ಕಿತಕಿತ ಕಿತ್ತಿಕೊಳ್ಳತೊಡಗಿದರು ಸಿವನೆ.. ನಗಲೋ, ನಗಲೋ ಯಂದು ತಮ ತಮ್ಮ ಗಂಡಂದಿರನು ಅವರವ ಹೆಂಡಂದಿರು ಪಿಡಪಿಡನೆ ಪೀಡಿಸತೊಡಗಿದರು ಸಿವನೇ.. ಯೀ ಅಟಾಟೋಪಕ್ಕೆ ಅರಮನೆಯೇ ಕಾರಣವೆಂದು ಬಗೆದು ತಮ ತಮ್ಮ ಕೂಸು ಕುನ್ನಿಗಳ ಸಮೇತ, ಕುವ್ವಾಡಕ್ಕೆ ಹೆಸರಾದ ತಮ ತಮ್ಮ ಗಂಡಂದಿರ ಸಮೇತ ಅರಮನೆಯ ಬಾಗಿಲು, ಕಿಟಕಿ, ಜಾಲಂದರಗಳ ಹಿಡಿದು ಜಗ್ಗಾಡತೊಡಗಿದರು ಸಿವನೇ.. ಗೋಡೆಗಳನು ಗುದಗುದನೆ ಗುದ್ದಿ ಹಣ್ಣುಗಾಯಿ, ನೀರುಗಾಯಿ ಮಾಡತೊಡಗಿದರು ಸಿವನೇ.. ಪಟ್ಟಣದ ತರಾವರಿ ಹಾಹಾಕಾರಗಳ ಚಂಡಮಾರುತಕ್ಕೆ ಸಿಲುಕಿ ತತ್ತರಿಸತೊಡಗಿದ್ದ ಅರಮನೆಯೊಳಗೆ ರಾಜಪರಿವಾರದ ಮಂದಿ ತಮ ತಮ್ಮ ಜೀವಗಳನು ಕಯ್ಯ ಮುಟುಗಿಯೊಳಗೆ ಹಿಡಕೊಂಡು ಜೀವಭಯದಿಂದ ಗಡಗಡಾಂತ ನಡುಗಲಕ ಹತ್ತಿದ್ದರು ಸಿವ ಸಂಕರ