ಮಾದೇವಾ.. ಅರಮನೇನ ದಾಟಿದರೆಂಗೋ? ವುಳಾಗೆ ವುಳಕೊಂಡರೆಂಗೋ? ಅಂಬ ಕಾರಣಕ್ಕೆ ಹೊರ ಪರಪಂಚದ ಸರುವ ಸಂಪರಕ ಕಡಿದುಕೊಂಡಿದ್ದ ಅರಮನೆ ವಳಾಗ ರಾಜಪರಿವಾರದ ಮಂದಿ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡೋದು, ಅವರನ್ನಿವರು ನಿಂದಿಸೋದು, ಯಿವರನ್ನವರು ನಿಂದಿಸೋದು ನಿಲುಕಡೀಕಿಲ್ಲದೆ ಮುಂದುವರೆದಿತ್ತು ಸಿವನೇ.. ಅಸಂಖ್ಯಾತ ಸಂಖೆಯಲ್ಲಿ ಅರಮನೆಯೊಳಗೆ ಯಿವೆ ಯನ್ನಲಾದ ಸುರಂಗ ಮಾರಗಗಳ ಹುಡುಕಾಟ ನಿರುವಿರಾಮವಾಗಿ ನಡೆದೇಯಿತ್ತು ಮುರಹರನೇ, ಸಮಸ್ತ ಪಟ್ಟಣದ ದುಕ್ಕ ವಂದು ತೂಕವಾಗಿದ್ದರೆ ಅರಮನೆಯೊಳಗಿದ್ದ ದುಕ್ಕವೇ ಯಿನ್ನೊಂದು ತೂಕವಾಗಿತ್ತು.. ಸಾಂತುವನ ಮಾತುಗಳ ಘೂೕರ ಬರ ಅನುಭವಿಕೆ ಮಾಡುತಲಿದ್ದ, ಸಮಾಧಾನಕರ ವಂದೇ ವಂದು ಮಾತಿಗಾಗಿ ಪರದಾಡುತಲಿದ್ದ, ಘೂೕರ ಪರಾಭವದ ಛಣಗಳನ್ನು ಯಣಿಕೆ ಮಾಡುತಲಿದ್ದ, ನಿಂದಾಪನಿಂದನೆಯ ಮಾತುಗಳ ಬರಸಿಡಿಲ ಪ್ರಹಾರಕ್ಕೆ ತತ್ತರಿಸುತಲಿದ್ದ, ನಿಟ್ಟುಸಿರ ಝಂಝಾನಿಲಕ್ಕೆ ಸಿಲುಕಿ ತರಗೆಲೆಯ ರೂಪ ಪಡೆಯುತಲಿದ್ದ ಅರಮನೇನ ಅಂದಾಡಿದರ ಯೇನು ಪ್ರಯೋಜನ...? ಅದೊಂದು ಅರಮನೇನಾ? ಅದರೊಳಗ ವಸ್ತಿಯಿರೋದು ರಾಜ ಪರಿವಾರವೇನಾ? ಕಾಲದ ಹೊಡೆತಕ್ಕೆ ಸಿಲುಕಿ ಸಾಂಬವಿಯ ಸಾಪಕ್ಕೆ ಸಿಲುಕಿ ಅದು ಯೀಗ ಹೆಂಗಯಿತೆಂದರ ವಂದು ನಾಕುಮಂದಿ ಸೇರಿಕೊಂಡು ವುಫೆಂದು ವÆದಿದಲ್ಲಿ ಕಡಕೊಂಡು ಬೀಳೋವಂಗಯಿತೆ.. ಅದರೊಳಗಿನ ಮಂದಿ ಭೂತಕಾಲದ ನೆನಪುಗಳನುಂಡೂ ವುಂಡು ನರಪೇತಲಾಗವರೆ.. ಜೇಡೊಳಗೆ ತಲೆ ಮರೆಯಿಸಿಕೊಂಡಿರುವ ಸಿಮ್ಮಾಸನಕ್ಕೆ ಡೊಣ್ಣೇಕಾಟದ ಮಯ್ಯಿ ಭಾರವನ್ನು ತಡಕೊಳ್ಳೋ ತಾಕತ್ತಿಲ್ಲ.. ಬೊಟ್ಟು ದಮಡಿಗೆ ಕೊಡತೀವಂದರೂ ಅರಮನೆಯೊಳಗಿನ ಸಸ್ತರಾಸ್ತರಗಳನ್ನು ತಗೊಳ್ಳುವವರು ಯಾರೂ ಯಿಲ್ಲ.. ಅದಕ ಯಿದಕ್ಯಾಕ ಅಂಬುವಿರಿ.. ಯಿದಕ ಅದಕ್ಯಾಕ ಅಂಬುವಿರಿ.. ಯಂದು ಮುಂತಾಗಿ ಬುದ್ದಿವಾದ ಹೇಳೂತ ಹಿರೀಕರು ಸಂತರಸ್ತರನ್ನು ಅಲ್ಲಿಂದ ಕರಕೊಂಡೊಯ್ದು ಅವರನ್ನು ಮೂಲನೆಲೆಗೆ ಸೇರಿಸುವ ಪ್ರಯತ್ನ ಮಾಡಿರದೇ ಯಿದ್ದಲ್ಲಿ....
ಹಿರೀಕರss ನೀವು ಯೇನೇ ಹೇಳಿರಿ ತಂದೆಗೋಳಾ.. ಸುಮ್ಮಕ ಯಿದ್ದ ಮೋಬಯ್ಯನ ತಡವಿ ಯಿಡೀ ಪಟ್ಟಣದ ಬೆನ್ನಿಗೆ ಕೇರು ಬಡಿದಿರೋದು ಯಿದೇ ಅರಮನೆಯಾ.. ತನ್ನ ಪಾಡಿಗೆ ತಾನು ಆಡಿಕೋತಯಿದ್ದ ಪಟ್ಟಣದ ಕುಂಡಿ ಚಿವುಟಿ ಅಳೋಹಂಗ ಮಾಡಿ ಯೀಗ ಲೊಳ್ಳಾಳ್ಳಾಯಿ ಹಾಡ್ತಿರೋದು ಯಿದೇ