ಯಲ್ಲಮ್ತಾಯಿ. ಅದು ಅವಯ್ಯನ ಕೆಂದುಮುಖವನ್ನು ತನ್ನ ಹಂಚಿಕಡ್ಡಿ ಬೊಗಸೆಗಳೊಳಗೆ ಹಿಡಕಂತು. ಯಂಜಲೆಲೆ ಅಂದರ ನೀನೇ ಕಣಪ್ಪಾ.. ಯೇಟುಂಡರೂ ಸವೆಯಾಕಿಲ್ಲ ನೀನು.. ನಿನ ಸರೀರದ ಕೊನೆ ಅಗುಳನ್ನು ವುಂಡು ಯೀ ಬಾವಿಯೊಳಗ ಯಂಜಲಗಯ್ನ ತೊಳಕಂತೀನಿ.. ನಿನಗೋಸುಗರ ನಾನಿಲ್ಲೇ ಕಾಯುತ ಕೂಕಂಡಿರುತೀನಿ.. ಯಂದೇನೇನೋ ನುಡಿದೇಟಿಗೆ ಮಂದಿ ತತ್ತರಿಸಿತು. ಯವ್ವಾ.. ನಿನ ಬಾಯಿಂದ ಯಿಂಥ ಮಾತು ಬರೋದೇನು.. ಯೇನು ತೆಪ್ಪು ಮಾಡ್ಯಾನೆ ನಮ್ಮ ಕಲೆಟ್ಟರು ಸಾಹೇಬ.. ಬ್ಯಾಡವ್ವಾ ಬ್ಯಾಡss ತಾಯೀ.. ಆಡಿದ ಮಾತನ್ನು ವಾಪಾಸು ತಕ್ಕಾss ಯಂದು ಕಯ್ಯಿ ಮುಗುದು ಬೇಡಿಕಂತು.. ಅದಕಿದ್ದು ಮುದೇದು ತರಾವರಿ ನಗಾಡಿತು.. ಬೊಗಸೇನ ವಾಪಾಸು ತಕ್ಕಂಡು ಲಟಲಟಾಂತ ಲಟ್ಟಿಗೆ ಮುರಿಯಿತು.. ಮುಂದೊಂದಿವಸ ನೀನಿಲ್ಲಿಗೆ ಬಂದೇ ಬರುತಿ, ನನ್ನೆಂಜಲು ಯಲೆಯೇ ಯಂದನಕೋತ ಅನಕೋತ ತಿಪ್ಪೆಗಳ ಕಡೇಕ ಹೋತು ಸಿವಸಂಕರ ಮಾದೇವಾss
ಯಂಜಲೆಲೆ ಯಲ್ಲಮ್ತಾಯಿಯ ಬಾಯಿಯಿಂದ ಹೊಂಟ ಮಾತುಗಳು ಹಾದಿ ನಡುವೆ ನಿಲ್ಲಲಿ.. ಅವು ಮುಂದಕ್ಕ ಪಯಣ ಬೆಳೆಸಿ ಸಾಹೇಬನನ್ನು ಮುಟ್ಟದಂಗ ಮಾಡು ಸಿವನೇ, ಯಂಜಲೆಲೆ ಅಂದರ ಯೇನರ್ಥ? ಕೊನೆ ಅಗುಳು ಅಂದರ ಯೇನರ್ಥ? ಯಿದು ಸಾಪವಾ, ವರವಾ.. ಸಾಸುವೆ ಕಾಳೊಳಗ ಸಮುದ್ರಅಡಗಿರುವಂಗಯಿತಲ್ಲಾ.. ಯಲ್ಲಾ ಅಯೋಮಯ.. ವಂಥಟಗಾದ ತಮ ತಮ್ಮ ಮುಖಗಳನ್ನು ಕ್ರುತಕವಾಗಿ ಅರಳಿಸುತ್ತ ಮಂದಿ ಹ್ಹಾ.. ಹ್ಹೂ ಅಂತಿದ್ದರು ಸಿವನೇ.. ವುಘೕ ಅಂತಿದ್ದರು ಸಿವನೇ.. ತಮ ತಮ್ಮ ಮಂದೇವರ ಮುಂದ ತುಪ್ಪದ ದೀಪ ಹಚ್ಚಿ ಸಾಹೇಬನಿಗೆ ಆಯುರಾರೋಗ್ಯ ಕೋರಬೇಕಂತ ಅಂದುಕೊಳ್ಳುತ್ತಿದ್ದರು ಸಿವನೇ..
ಅವರ ನಡುವೆ ಥಾಮಸು ಮನ್ರೋ ಸಾಹೇಬನು ಅವಧೂತನೋಪಾದಿಯಲ್ಲಿ ಹೆಜ್ಜೆ ಹಾಕುತ್ತಿರಲು.. ಮಾಯಾ ಮುಚ್ಫಿಂದ್ರನಂತೆ ನೋಡುತ್ತಿರಲು.. ಸದರಿ ಪಟ್ಟಣದ ಬಿಕೋ ಯಂಬ ಬಯಲೊಳಗೆ ಟೆಮರಿಂಡು ಟ್ರೀಗಳನ್ನು ಬೆಳೆಸಿದರ ಹೆಂಗೆ ಯಂದು ಯೋಚಿಸುತ್ತಿರಲು.. ಜಡೆಗಟ್ಟಿದ ತಲೆಗಳ ಮ್ಯಾಲ ಕಯ್ನ ಆಡಿಸುತ್ತಿರಲು, ಮುಗುಳುನಗೆಯನ್ನು ಸಮ್ಮೋಹನಾಸ್ತರ ದೋಪಾದಿಯಲ್ಲಿ ಬೀರುತ್ತಿರಲು.. ತೆರೆದ ಕಣ್ಣೊಳಗೆ ಸುಖೀ ರಾಜ್ಯದ ಕನಸು ಕಾಣುತ್ತಿರಲು.. ಗವರ್ನರು ಮಾಶಯ ವೆಲ್ಲೆಸ್ಲಿಯ ಧೀರೋದಾತ್ತ ನಿಲುವನ್ನು ಧೇನಿಸುತ್ತಿರಲು..