ಬೀದಿ ಬೀದಿಲಿ.. ಗಲ್ಲಿ ಗಲ್ಲಿಗಳಲ್ಲಿ ತೂಗುಬಿಟ್ಟಿದ್ದರು, ಕೆತ್ತಿಡಿಸಿದ್ದರು ಸಿವನೇ...
ಅಂಥ ರಾಜ್ಯಗಳಿಂದ ಕೊಸರಿಕೊಂಡು ಕೂಡ್ಲಿಗಿಯಂಥ ಪಟ್ಟಣಗಳಿಗೆ ವಲಸೆ ಹೋಗಿದ್ದ ಪ್ರಜೆಗಳ ಸ್ಥಿತಿಗತಿಯಂತೂ ಅಯೋಮಯವಾಗಿತ್ತು. ಯಿಂಥ ಸಂತರಸ್ತರಿಗೆ ಗುರುತಿನ ಚೀಟಿ ಕೊಡುವುದರ ಬಗ್ಗೆ, ಮರುವಸತೀನ ಕಲ್ಪಿಸುವ ಬಗ್ಗೆ, ವಮ್ಮತ ಆಳುವ ವರ್ಗಗಳಲ್ಲಿ ಮೂಡಿರಲಿಲ್ಲ.. ಯಿವರು ಆಯೋಗಗಳನ್ನು ಅವರಲ್ಲಿಗೆ ಕಳಿಸುವುದು, ಅವರು ಯಿವರಲ್ಲಿಗೆ ಕಳಿಸುವುದು.. ಯಾದೇ ವಂದು ನಿರ್ಣಯಕ್ಕೆ ತಗಲದಿರುವುದು, ಹಿಂಗs ಕಾಲಕ್ಷೇಪ ಮುಂದೊರೆದಿತ್ತು ಸಿವನೇ... ಹಿಂಗಾಗಿ ಸಂತರಸ್ತರು ವÆರುಗಳೊಳಗ ಯಿರಲಿಕ್ಕಾಗದೆ, ಅಡವಿ ಪಾಲಾಗಲಿಕ್ಕಾಗದೆ.. ಯಿಲಯಿಲನೆ ವದ್ದಾಡುತ್ತಿದ್ದರೆಂಬಲ್ಲಿಗೆ.. ಯಿಂಥ ಪರಿಸ್ಥಿತಿಗಳಿಂದ ತಲ್ಲಣಕ್ಕೀಡಾಗಿದ್ದ ಪ್ರದೇಶ ಗಳ ಬೆನ್ನ ಮ್ಯಾಲ ಬರೆಯಳದಂತೆ ಮೂಲೆಮುರುಕಟ್ಟಿನಲ್ಲಿದ್ದ ಕುದುರೆಡವಿನಿಂದ...
ಆಕಾಸದೆತ್ತರ ನಿಲುವಿನ ಹೆಣುಮಗಳ ಆ ಪಟ್ಟಣವನ್ನು ಸೇರಿಕೊಂಡವಳಂತೆ.. ಅದಾದೋ ಪಿಕದಾನಿಯವನ ಜಾಲಿಮರದಂಥ ಸರೀರದೊಳಗ ವಸಾಹತು ಸ್ಥಾಪನೆ ಮಾಡಿರುವಳಂತೆ.. ಕೆಂಗಣ್ಣುಗಳ ಮ್ಯಾಲಿನ ಹುಬ್ಬುಗಳನು ಮಾಯಮಾಡಿರುವಳಂತೆ.. ತಾಯಂದಿರ ಯದೆಯೊಳಗ ವುಪ್ಪು ನೀರು ತುಂಬಿರುವಳಂತೆ.. ಪಟ್ಟಣದಿಂದ ನಗೆಯನ್ನು ವುಪಸಮ್ಮಾರ ಮಾಡಿರುವಳಂತೆ.. ಯಿಂಥ ನಾನಾ ನಮೂನಿ ವರ್ತಮಾನದ ಝಳ ಹೊಂಟು ಬರುತ್ತಲೇಯಿತ್ತು. ಆಮಾತ್ಯ, ಸೇನಾದಿsಪತಿ, ಭಂಡಾರಿ ರಾಜಪರಿವಾರ ದಂಥವರನ್ನು ಆ ಅಗೋಚರ ಸಗುತಿ ಬಿಟ್ಟಿಲ್ಲವಂತಲ್ಲಾ.. ಅಯ್ಯೋ.. ಅಲ್ಲಿಗೆ ತಮ್ಮ ಮಗಳನ್ನು ಕೊಟ್ಟಿದ್ದೀವಿ.. ಅಯ್ಯೋ ಅಲ್ಲಿಂದ ಫಲಾನ ಯಿಂಥವರ ಮಗಳನ್ನು ತಂದುಕೊಂಡಿದೀವಿ.. ಅಯ್ಯೋ ಅವರ ಪರಿಸ್ಥಿತಿ ಯೇನಾಗಿರುವುದೋ.. ಹೋಗಿ ನೋಡಬೇಕಂದರ, ನೋಡಿ ಕರೆತರಬೇಕಂದರ ತಮ್ಮ ಹುಬ್ಬುಗಳು ನಿರ್ನಾಮವಾದರ ಹೆಂಗs ತಮ್ಮ ಮುಖದ ಮ್ಯಾಲಿಂದ ನಗೆ ವುತಾರಗೊಂಡರ ಹೆಂಗss ಹಿಂಗs ಯಸನ ಮಾಡುತ ಮಂದಿ ಕುದುರೆಡವಿದ್ದ ದಿಕ್ಕಿನತ್ತ ತಾಸುಗಟ್ಟಲೆ ನೋಡುವುದು.. ಗಳಿಗ್ಗಳಿಗ್ಗೊಮ್ಮೆ ನಿಟ್ಟುಸಿರು ಬಿಡುವುದು ಯಂಬಲ್ಲಿಗೆ..
ಹಗಲು ರೂಪದ ರಾತ್ರಿಯಿದ್ದ, ಮನಾರ ಹುಣ್ಣುಮಿಯಂದೂ ಮೂಡಲು ಚಂದ್ರಾಮ ನಿರಾಕರಣೆ ಮಾಡಿದ್ದ.. ನೀರು ಸುರುದೂ ಸುರುದೂ ಬತ್ತಿದ ಕಣ್ಣುಗಳಿದ್ದ ಬರದೆಡೆಗಳ ತುಂಬೆಲ್ಲ ದುಹ್ಸೊಪುನಗಳ ತುಡುಗಿಗೆ ಬಿದ್ದಿದ್ದ