ಮುಂದಕೂ ಕಿರಕೂ ಕಿರಕೂ ಯಂದು ಸಬುಧ ಮಾಡುತ ವಾಲಾಡುತ್ತಿದ್ದ ಸಿಮ್ಮಾಸನವನ್ನು ತದೇಕ ಚಿತ್ತದಿಂದ ನೋಡುತ ತನ್ನ ದವಡೇಲಿದ್ದ ತೊಂಬಲ ದುಂಡೆಯನ್ನು ಯಡಕೂ ಬಲಕೂ ತಳ್ಳಾಡುತ್ತಿರುವಾಗ್ಗೆ....
ಪರಗುಣಿ ಮಾಗಿ ಯಂಬುವ ಹಚ್ಚ ಹಸುರನೆಯ ಯಿಪ್ಪತ್ತು ಕೂರಿಗೆ ಹೊಲದಲ್ಲಿ ತನ್ನೆಡಗಾಲನ್ನು ಹುಲ್ಲಿನ ಹೊರೆಯ ಮ್ಯಾಲಿಟ್ಟು ತನ್ನೆರಡೂ ಕಯ್ಯಿಗಳನ್ನು ಸೊಂಟದ ಯರಡೂ ಬದಿಯಲ್ಲಿಟ್ಟು ಜಗಲೂರೆವ್ವ ‘‘ಹೋಹೋಯ್ ಸೂರಾss.. ಹೋಯ್ ಸೂರಾss..’’ ಯಂದು ಕೂಗಿದೊಡನೆ ಹೊಲದ ಮ್ಯಾರೇಲಿ ಆಸು, ಬೇವು, ಹೊನ್ನಿ, ಸಾಗುವಾನಿ ಯಿವೇ ಮರಗಿಡಗಳ ಮ್ಯಾಲ ಯಿಸ್ರಮಿಸಿ ಕೊಂಡಿದ್ದ ಕಾಗೆ, ಗೂಗೆ, ಮೀನುಳ್ಳಿ, ಮಿಂಚುಳ್ಳಿಯೇ ಮೊದಲಾದ ಪಕ್ಷಿಗಳು ಬೆಚ್ಚಿಬಿದ್ದು ಹಾರಿ ಮುಗಿಲ ಬಂiÀÄಲ ತುಂಬ ಅಂಡಾವರನಗೊಂಡವು....
ಮುಂಗೋಳಿ ಕೂಗಿನ ನಾದವನ್ನೆ ಹಾದಿ ಮಾಡಿಕೊಂಡು ಹೊಲ ಸೇರಿ ಯಂಟಾಳು ಮಾಡೋ ಕೆಲಸವನ್ನು ತಾನೊಬ್ಬಾಕೆಯೇ ಮಾಡಿ ಮುಗಿಸುವಂತಾಕೆಯಾದ ಜಗಲೂರೆವ್ವನ ತಂದೆ ಯಾರಪ್ಪಾ ಅಂದರೆ ಮಿಂಚೇರಿಯ ಪರಿಶೇ ಪಯ್ಕಿ ಪಯಿಲುವಾನನಾದ ಅಂತಾಡಪ್ಪನೆಂಬಾತನು, ತಾಯಿ ಯಾರಪ್ಪಾ ಅಂದರ ಕಂಬಳೆವ್ವನು, ಆ ದಂಪತಿಗಳಿಗಾಕೆ ಯಷ್ಟನೆಯವಳೆಂದರೆ ಅಷ್ಟಮ ಸುಪುತ್ರಿಯು, ತಾನು ಬಾಯಿ ಸತ್ತ ಹುಳದಂಥ ಮೋಬಯ್ಯನೆಂಬಾತನ ಕಯ್ಯಿ ಹಿಡಿದು ಆವತ್ತಿಗೆ ಬರೋಬ್ಬರಿ ಯಿಪ್ಪತ್ತೇಳು ವರುಷ ತುಂಬಿರುವುದು. ಆದರೆ ತನ್ನುದುರದೊಳಗ ವಂದಾದರು ನರಹುಳ ಕಂಡಿಲ್ಲ.. ಯರಡು ಕಂಭಗಳ ನಡುವೆ ಜ್ವಾಲೆ ಕಟ್ಟಿಲ್ಲ.. ಮೊಲೆ ವುಣುಸಿ ಲಾಲಿ ಪಾಡಿಲ್ಲ.. ಮುಟ್ಟು ನಿಲ್ಲೋ ಲಚ್ಚಣ ಕಾಣದ್ದ ರಿಂದಾಕೆಯು ಕಯ್ಯಿ ಹಿಡಿದ ಗಂಡನ ಮ್ಯಾಲ ಬ್ಯಾಸರ ಮಾಡಿಕೊಂಡಿದ್ದಿಲ್ಲ.. ವಂದಾನೊಂದಿನ ತವರು ಮನೀಗೆ ಹೋಗಿ “ಯಪ್ಪಾss ನನ್ನುದುರ ಬಿತ್ತೋರಿಲ್ಲದ, ರೆಂಟೆ ಹೊಡೆಯೋರಿಲ್ಲದ ಬರಡು ಹೊಲಾ ಆಗಯ್ತೆ.. ಮೊನ್ನೆ ವಂದಿನ ನಸುಕಿನಾಗ ಅಂಗಯ್ಲಾಡೋ ಅರಗಿಣಿ ಬಂದು ಮನೆಯಂಗಳದ ಬೇಯಿನ ಮರದ ಮ್ಯಾಲ ಕುಂತು ಬಂಜೆ ಬಂಜೆಯಂದು ಕೂಗಿದಂಗಾತು.. ನನ ಗಂಡನೆಂಬೋದು ಹಗಲಿಪ್ಪತ್ನಾಕು ತಾಸು ತೊಂಬಲ ವುಗುಳೋ ಪಿಕದಾನಿ ಹಿಡಕೊಂಡು ಅರಮನ್ಯಾಗ ಭಯ್ರಮಾಂಬೆಯ ಕಾಪಲ ಮಾಡತಯ್ತೆ.. ಅದಕ ಹೆಂಡತಿ ಯಿದ್ರೂವಂದs.. ಯಿರದಿದ್ರೂವಂದss.. ಕಂದನಿಲ್ಲದ ಬಂಜೆ ಬಾಳು ನೀಗೀ