ವಿಷಯಕ್ಕೆ ಹೋಗು

ಪುಟ:Aramane.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಾರ ಬಾಯೊಳಗಿಣುಕಿದರೂ ಚಿನ್ನಾಸಾನಿ ಸವುಂದರ್ಯದ ಯಿರಾಟ್ ಸೊರೂಪವು.. ಯಾರ ಕಿವಿಯೊಳಗಣುಕಿದರೂ ಚಿನ್ನಾಸಾನಿಯ ಮಧುರ ಮಂಜುಳ ನಿನಾದವು.. ಯಾರ ಕಣ್ಣೊಳಗಣುಕಿದರೂ ಚಿನ್ನಾಸಾನಿಯ ಸಿರಿಗಂಧದ ಗೊಂಬಿಯು.. ಕಣ್ಣು ಮುಚ್ಚಿದೊಡನೆ ಬೀಳುತಲಿದ್ದ ಕಣಸುಗಳ ತುಂಬೆಲ್ಲ ತಾನೇ ತಾನಾಗಿ ಯಿಜ್ರುಂಭಿಸುತಲಿದ್ದ ಚಿನ್ನಾಸಾನಿಯ ಕಣ್ಣುಗಳನ್ನು ಹುಡುಕಿಕೊಂಡು ಕೋಲ್ಮಿಂಚುಗಳು ಬಂದವು. ಆಕೆಯ ಮುಖದಲ್ಲಿ ನೆಲಸಲಕಂತ ಸೊರಗಲೋಕದ ನಂದನ ವನದಿಂದ ಪಾರಿಜಾತವೇ ಮೊದಲಾದ ಪುಷ್ಪಗಳು ಬಂದವು. ಆಕೆಯ ಸೊಂಟದಲ್ಲಿ ತಳವೂರಲಕಂತ ಸಿಂಹದ ನಡು ವಲಸೆ ಬಂತು. ಆಕೆಯ ಸ್ತನದ್ವಯಗಳಲ್ಲಿ ಬೀಡು ಬಿಡಲಕೆಂದು ತರಾವರಿ ಹಣ್ಣು ಹಂಪಲ ಗಳು ಬಂದವು. ಕೋಗಿಲೆಗಳ ಕಂಠಗಳಿಂದ ಯಿಂಪು ವಲಸೆ ಬಂದು ಆಕೆಯ ಕೋಮಲ ಕೊರಳೊಳಗೆ ಬೀಡುಬಿಟ್ಟಿತು.. ಹಿಂಗ ಕಿನ್ನರ, ಕಿಂಪುರುಷ, ಗಂಧರ್ವ ಸೊರಗಲೋಕ, ಸಸ್ಯಲೋಕ, ಜೀವಲೋಕ ಗಳಲ್ಲಿದ್ದಂಥ ಸಮಸ್ತ ಸವುಂದರ್ಯತನವು ನಾ ಮುಂದು ತಾ ಮುಂದು ಯಂದು ಅವಸರ ಬವಸರದಿಂದ ಬಂದು ಠಿಕಾಣಿ ಹೂಡಿದ ಪರಿಣಾಮವಾಗಿ ಚಿನ್ನಾಸಾನಿಯ ಸರೀರವು ಸವುಂದರ್ಯದ ವಸ್ತುಸಂಗ್ರಹಾಲಯವಾಯಿತು ಸಿವನೇ..

ಅಲ್ಲಲ್ಲಿಂದ, ಯಿಲ್ಲಲ್ಲಿಂದ, ಯಲ್ಲೆಲ್ಲಿಂದಲೋ ಆಗೋಚರ ಸವುಂದರತ್ವನಗಳು ಹೇಳದೇ ಕೇಳದೇ ಬಂದು ತನ್ನ ಸರೀರವನ್ನು ತುಂಬಿಕೊಂಡ ಫಲವಾಗಿ ಚಿನ್ನಾಸಾನಿಗೆ ಕಣ್ಣುಗಳೊಳ ಗೊಂದು ನಮೂನಿ ಆಗತೊಡಗಿದವು. ಕಿವಿಯೊಳಗೆ ಅನಿರ್ವಚನೀಯ ನಾದತರಂಗಗಳು ವುಲ್ಬಣಿಸ ತೊಡಗಿದವು. ಯದೆಭಾರ ಯಂದೆನ್ನಿಸಲಾರಂಬಿsಸಿತು. ನಡುವಿನೊಳಗೊಂದು ನಮೂನಿ, ತೊಡೆಗಳೊಳಗೊಂದು ನಮೂನಿ, ರೆಪ್ಪೆಗಳೊಳಗೊಂದು ನಮೂನಿ ಅನಿರ್ವಚನೀಯ ಅನುಭೂತಿ ಆಗಲಾರಂಭಿಸಿತು. ಚಿಟ್ಟೆ, ಪತಂಗ, ದುಂಬಿಗಳು ತನ್ನ ಮುಖವನ್ನೆ ವಂದು ಹುವ್ವೆಂದು ಭಾವಿಸಿ ಮುತ್ತತೊಡಗಿದವು.. ಯಾರ್ಯಾರಮೋ ಕಣ್ಣುಗಳು ತನ್ನನ್ನು ನೋಡುತ್ತಿರುವವು, ಯಾರ್ಯಾರಮೋ ಕಿವಿಗಳು ತನ್ನನ್ನಾಲಿಸುತ್ತಿರುವವು.. ಗಾಳಿ ತನ್ನ ಗಲ್ಲಕ್ಕೆ ಮುದ್ದು ಕೊಟ್ಟಂಗಾಗತಯ್ತೆ.. ಗಾಳಿ ತನಗೆ ಚಕ್ಕಟೆಗುಳ್ಳಿಯಿಟ್ಟಂಗಾಗತಯ್ತೆ.. ಗೋಡೆ ಮ್ಯಾಲಿರೋ ಸ್ರೀ ಕ್ರುಷ್ಣ ಪರಮಾತುಮ, ಶಂಭಂತ ಮಾರಾಜ, ದುಶ್ಯಂತ ಮಾರಾಜ, ಸ್ರೀ ಕ್ರುಷ್ಣದೇವರಾಯ, ಪರಮೇಸ್ವರ ಯಿವರೆಲ್ಲ ತಮ ತಮ್ಮ ಚಿತ್ರಪಟಗಳಿಂದ ಹೊರ ಹಾಯ್ದು ತನ್ನನ್ನು ಜುಲುಮಿ ಮಾಡಿದಂಗಾಗತಯ್ತೆ.. ತಾನು ಕಲಿಯುತ್ತಿರೋ ತರಾವರಿ ರಾಗಗಳು