ವಿಷಯಕ್ಕೆ ಹೋಗು

ಪುಟ:Aramane.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನರವ್ವಾ.. ಯಂದು ತಾನಲ್ಲಿಂದ..

ಅಗೋ ಅಲ್ಲಿ ಮಗಳು.. ಯಿಗೋ ಯಿಲ್ಲಿ ಅಪ್ಪನು.. ಪರಸ್ಪೂರ ತಮ್ಮೀರ್ವರ ನಡುವೆ ದ್ರುಸ್ಟಿಕಾರ್ಯವು ಯೇರುಪಡದೆ ಯೇಸು ಕಾಲವಾತು? ಯೇನು ಕತೆಯು? ಮುಂದಕ ನಡಿತಾ ನಡಿತಾ ತಂದೆ ಮಗಳನ್ನು ನೋಡುವುದು, ಮುಂದ ಮುಂದಕ ನಡಿತಾ ನಡಿತಾ ಮಗಳು ತಂದೆಯನ್ನು ನೋಡುವುದು ವಂದರಗಳಿಗೆ ನಡಿತೂ.. ನಡಿತು. ‘‘ಯಾರಪ್ಪಾ.. ನೀನು ನನ್ನಪ್ಪಯಿದ್ದಂಗದೀಯಲ್ಲಾ”... “ಅವುದವ್ವಾ.. ಖರೇವಂದರ ನಿನಗ ಸೊಂತ ಅಪ್ಪ ಆಗಬೇಕು.. ಅದಿರ್ಲಿ.. ನೀನು ಯೀ ಅಂತಾಡೆಪ್ಪನ ಮಗಳು ಜಗ್ಲೂರೆವ್ವ ಅವುದಲ್ಲೋ?”.. “ಅವುದಪ್ಪಾ.. ಅವುದು.. ಆ ಜಗಲೂರೆವ್ವ ನಾನೇಯಾ.. ಅದಿರ್ಲಿ.. ನೀನ್ಯಾಕ ಬಂದಿ..” ..”ನಿನ್ನೋಡಲಕಂತ ಬಂದೀನಿ ತಾಯೀ?”..”ನನಗೇನಾಗಯ್ತಂತ ಆಟು ದೂರದಿಂದ ನೋಡಲಕ ಬಂದೀಯಪ್ಪಾ..” ..”ತಂದೆ ಆದವs ತನ್ನ ಮಗಳನ್ನು ನೋಡಲಕ ಸುಮಸುಮಕ ಬರಬಾರದಂತೀಯೇನು?”.. “ನಿನ್ನೋಡಲಕಂತ ಬಂದೀನಿ ತಾಯಿ “.. “ಅವುದಪ್ಪಾ ಅವುದು.. ಸುಮ ಸಮಕ ಬರಬಾರದು.. ತಂದೆ ಆದಾವs ಮಗಳು ಹೇಳಿಕಳುವಿದರs ಬರಬೇಕು..”.. “ಯೀಟೆಲ್ಲ ಆದಮ್ಯಾಕೂ ನೀನ್ಯಾಕ ಹೇಳಿ ಕಳುವಲಿಲ್ಲವ್ವಾ..”.. “ಯೇನಾಗಯ್ತಂತ ಹೇಳಿಕಳುವಲಪ್ಪ.. ಸತಿ ಆದವಳ ಬಾಳಿನೊಳಗ ಯಿದೆಲ್ಲ ಮಾಮೂಲು..” ಹಿಂಗs ತಂದೆ ಮಗಳ ನಡುವೆ ಮಸ್ತು ಮಾತುಕತೆ ನಡೆದದ್ದನ್ನು ನಾಕು ಮಂದಿ ನಿಂತು ಕುಂತು ನೋಡದೆ ಯಿರಲಿಲ್ಲ.. ಯಂಥ ತಂದೆಯಿದ್ದಿರಬೇಕಿತನು ಯಂದು ಹೆಣುಮಕ್ಕಳೂ, ಯಂಥ ಮಗಳಿದ್ದಿರಬೇಕೀಕೆಯು ಯಂದು ತಂದೆಯಂದಿರೂ.. ಅದೆಲ್ಲಿಂದಲೋ ಮೋಡಿ ಬಂದ ಸೂರನು ಅವಯ್ಯನ ಸುತ್ತ ಯಗರಾಡಿದ್ದೇನು? ವಯ್ಕ ವಯ್ಕ ಅಂದದ್ದೇನು? ಅವಯ್ಯನ ಮಖಮಾರಿ ನೆಕ್ಕಾಡಿದ್ದೇನು? ಪುಜಾಸ್ಥಳವಾಗಿ ಮಾರುಪಟ್ಟಿದ್ದ ತನ್ನ ಗಂಡನ ಮನೆಕಡೇಕ ಬೊಟ್ಟುಮಾಡಿ ತೋರಿಸದೆ ಹಡದಪ್ಪನನ್ನು ಸೀದss ಬೇಯಿನ ಮರದಡೀಕೆ ಕರೆದುಕೊಂಡು ಬಂದಳು.

ಅಲ್ಲಿಲ್ಲಿ ನಿಂತ ನಿಲುವೀಲೆ ನೋಡುತಲಿದ್ದವರೆಷ್ಟೋ? ಯಿಲ್ಲಲ್ಲಿ ಕುಂತ ಕೂನಕೀಲೆ ನೋಡುತಲಿದ್ದವರೆಷ್ಟೋ?.. ಮಿಂಚೇರಿ ಸಮುಸ್ಥಾನದ ಪಯಿಲುವಾನರಿಗೇನು ಕುದುರೆಡವೇನು ಖೂನ ಗುರುತ ಯಿರದಿದ್ದ ಸ್ಥಳಯೇನಾಗಿರಲಿಲ್ಲ.. ತಾನು ಹರೇದವನಾಗಿದ್ದಾಗ ಸದರಿಪಟ್ಟಣದ ಕಲ್ಲ, ಮಲ್ಲ ಯಂಬ ಮಲ್ಲರೀರ್ವರನ್ನು ಯಡಬಲಕ ಯಿಟುಕೊಂಡು ದೂರದ ಯಿಸಿಲ ಪಟ್ಟಣದ ರಾಜಾಸ್ರಯದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ