ಅಪುರ್ವ ಸೋಭೆಯನ್ನು ವರಣನ ಮಾಡಲಕ ಆದಿಸೇಸನಿಗೂ ಅಸದಳ..” ಯಂದು ಮುಂತಾಗಿ ಗುಬ್ಬೆಮ್ಮ ತಾನು ಕಂಡುಂಡ ಅನುಭವವನ್ನು ಸಾದರಪಡಿಸುತಲಿತ್ತು.. ತಾನೂ ಜಗಲೂರೆವ್ವನ ನೇತ್ರುತ್ವದ ನಿಯೋಗದೊಂದಿಗೆ ಕೂಡ್ಲಿಗಿ ಮಟ ಹೋಗಿ ಬಂದಿತ್ತಲ್ಲಾ.. ಆರಕ್ಕೇರದ ಮೂರಕ್ಕಿಳಿಯದ ಜಾಯಮಾನವಂದಿಗಳಾದ ಆಕೆಯ ಕಟ್ಟಾ ಅಭಿಮಾನಿಯಾಗಿ ತಾನೂ ಪರಿವರ್ತನಗೊಂಡಿತ್ತಲ್ಲಾ.. ನಿಯೋಗ ಕುದುರೆಡವು ಕಡೇಕ ಮರಳಿದ ತರುವಾಯ ತಾನೂ ಕುಂಪಣಿ ಸರಕಾರದ ಬಂಗಲೆಯೊಳಗೆ ವುಳಕೊಂಡಿತ್ತಲ್ಲಾ.. ಯಡ್ಡವರ್ಡನ ಹೆಂಡತಿ ಜೆನ್ನಿಫರಮ್ಮಳ ಸವುಂದರ್ಯಕ್ಕೆ ತಾನೂ ಮರುಳಾಗಿತ್ತಲ್ಲಾ....
‘ಯಲೈ ಕಾಗೆಮ್ಮನೇ ಹೇಳುತೇನಿ ಕೇಳು.. ಆಕೆಯ ಸವುಂದರ್ಯ ಮಾಮೂಲು ಸವುಂದರ್ಯ ಅಲ್ಲ ಕಣೇ ನಮ್ಮವ್ವನೇ.. ಹಸುಕೊಂಡೋನಿಗೆ ವುಂಡೊಡನೆ ಆಗುವ ಅನುಭೂತಿಗೆ ಸರಿಸಮನಾದ ಸವುಂದರ್ಯ, ತತ್ವ ಗೀತೆಯೊಳಗಿರುವ ಅನುಭಾವ, ಹೂವಿನೊಳಗೆ ಅಡಕವಾಗಿರುವ ಸ್ನಿಗ್ದತೆ, ಅನ್ನದೊಳಗಿರುವ ಸಂತ್ರುಪ್ತಿ, ನೀರಿನೊಳಗಿರುವ ನೆಮ್ಮದಿ, ತಾಯಿ ಯದೆಯೊಳಗಿರುವ ವಾತ್ಸಲ್ಯ, ಹಿರಿಯರ ಮನಸ್ಸಿನೊಳಗಿರುವ ಸಾಂತುವನ ಯಿವೆಲ್ಲ ಕೂಡಿದಲ್ಲಿ ಯೇನಾಗುವುದೋ ಅವೆಲ್ಲ ತಾನಾಗಿರುವಳು ನೋಡು, ಆಕೆಗೆ ತನ್ನ ಬಗ್ಗೆ ವಂಥಟಗಾರ ಹಮ್ಮಿಲ್ಲ.. ವಂಥಟಗಾರ ಬಿಮ್ಮೂಯಿಲ್ಲ... ಆಕೆ ವಂದೊಂದು ಹೆಜ್ಜೆ ಯಿಕ್ಕುತಾ ಯಿದ್ದರ ಭೂಮ್ತಾಯಿ ಪುಳಕ ಗೊಳ್ಳುತಲಿದ್ದಳು.. ತನ್ನೊಂದೊಂದು ನೋಟದಿಂದ ಮಂಪರನ್ನು ಬಿತ್ತಿ ಬೆಳೆಯುತ ಲಿದ್ದಳು.. ತನ್ನೊಂದೊಂದು ಮಾತಿನಿಂದ ತಾನು ಅದ್ವಿತೀಯ ತಾಯಿ ಯಂಬುದನು ಭಾಸ ಮಾಡುತಲಿದ್ದಳು.
ಆ ಮಾತುಗಳನ್ನು ಕೇಳಿಸಿಕೊಂಡು ಕಾಗೆಮ್ಮನ ಹೊಟ್ಟೆ ತೊಳಸಿ ಬಂತು.. ‘‘ಯಲಾಯ್ ಗುಬ್ಬೆಮ್ಮನೇ, ಆಕೆಯ ಸವುಂದರ್ಯನ ವರಣನ ಮಾಡಿ ನನಗ ಅವಮಾನ ಮಾಡಬ್ಯಾಡ. ಆಕೆ ಯೇಟಿದ್ದರೂ ಪರಂಗಿ ಹೆಣುಮಗಳಂಬುದನ ಮರೆಯಬ್ಯಾಡ.. ಮುಂದೇನಾತಂಬುದನ ಲಗೂನ ಹೇಳು” ಯಂದು ಕೊಸರಿ ನುಡಿಯಲದಕ್ಕೆಯಿದ್ದು ಗುಬ್ಬೆಮ್ಮನು,
“ಅದಕ್ಯಾಕೆ ಮನಸನ ತಟಗು ಮಾಡಿಕಂತಿ ಕಾಗೆಮ್ಮ.. ನೀನು ಕರ್ರಗಿರುವುದಕಲ್ಲ ಯೀಟು ಸಿಟ್ಟು.. ಯವ್ವಾ ನೀನು ಸುಳ್ಳು ಹೇಳಿದರೆ ಕೇಳುತ್ತಿ, ಖರೆ ಹೇಳಿದರೂ ಕೇಳುತ್ತೀ. ಯಾಕಂದರ ನೀನು ಅರೀದಾಕಿ ಅದೀ.. ಆ ಅಯ್ಲುಗೇಡಿ ಮೋಬಯ್ಯನ ಅಯ್ಲು ಬಡಕೊಂಡು ವೂರುವದಕನ ಬಿಟ್ಟು