ಸಿವನೇ.. ಪಟ್ಟಣಸೋಮಿಗಳು ತಮಗೆ ಫಲಾನಯಿಂಥ ಕಡೇಕ ಮೋಬಯ್ಯನ ಸರೀರವು ಬೀಡು ಬಿಟ್ಟಯ್ತೆ ಯಂದು ಸಾವಾಸಯ್ಯ, ವನುವಾಸಯ್ಯರು ಸುದ್ದಿ ಮುಟ್ಟಿಸಿದಲಾಗಾಯ್ತು ಹ್ಹಾ.. ಅದು ಆ ಕಡೇಲಿಂದ ಬರಲಿ, ಯಿದು ಯೀ ಕಡೇಲಿಂದ ಬರಲಿಯಂದು ತಲಾವಬ್ಬೊಬ್ಬರು ನೂರು ಜೊತೆ ಕಾಲು, ನೂರು ಜೊತೆ ಕಯ್ಯಿಗಳನ್ನು ಮುಡಕೊಂಡು ಬಿಟ್ಟಿದ್ದರು ಹ್ಹಾಂ, ಸಾಂಬವಿಯು ಮೋಬಯ್ಯನ ಸರೀರವನ್ನು ಪುಷ್ಪಕ ಯಿಮಾನ ಮಾಡಿಕೊಂಡು ಸೊರಗದ ಕಡೇಕ ಹೋಗಿದ್ದಿರಬೌದೆಂದೇ ತಾವೆಲ್ಲ ನಂಬಿದ್ದ ಪಟ್ಟಣದ ಭೋಪಾಲು ಮಂದಿ ನಂಬುಗೆ ಮತ್ತು ಅಪನಂಬುಗೆಗಳ ನಡುವೆ ಜೋಕಾಲಿ ಆಡುತಲಿದ್ದರು ಹ್ಹಾ. ಸಾವಾಸಯ್ಯ, ವನುವಾಸಯ್ಯಂದಿರನ್ನು ಪರಾಂಬರಿಸುತ್ತ ಯೇನು ಕಂಡಿರಿ? ಯೇನು ಬಿಟ್ಟಿರಿ? ಅಲ್ಲಿ ಮೋಬಯ್ಯನ ಸರೀರ ದೊರಕಲಿಲ್ಲಾಂದರೆ ನಿಮ್ಮನ್ನೀವೂರ ಮಂದಿ ವುಳಗೊಡುವರೇನು? ಯಂದು ಗತ್ತು ಹಾಕತೊಡಗಿದರು. ಯೀ ಸೋದರರೀರ್ವರು ಸುಳ್ಳು ಹೇಳಿರಲಿಕ್ಕಿಲ್ಲ ಯಂಬ ಬಲವಾದ ನಂಬಿಕೆಯಿಂದ.....
ಯೀರೇಳು ಲೋಕಗಳ ಸಂಭರವು ತುಂಬಿದ ಪರಿಣಾಮವಾಗಿ ಕುದುರೆಡವು ಪಟ್ಟಣವು ವಂದು ಲಕ್ಷ ಕಣ್ಣುಗಳನ್ನು ಮುಡಿದು ಪಿಳಿಪಿಳಿಗುಟ್ಟಲಾರಂಬಿsಸಿತು, ಯರಡು ಲಕ್ಷ ಕಯ್ಯಿಕಾಲು ಗಳನ್ನು ಮುಡಕೊಂಡು ಚಲನೆಗೆ ಹಾತೊರೆಯಲಾರಂಬಿsಸಿತು, ವಂದು ಲಕ್ಷ ಬಾಯಿಗಳನ್ನು ಮುಡಕೊಂಡು ಮಾತಾಡಲಾರಂಬಿsಸಿತು. ನೂರು ಗಾವುದುದ್ದದ ರೆಕ್ಕೆಗಳನ್ನು ಮುಡಕೊಂಡು ಕುಂತಳ ಸೀಮೆ ವುದ್ದಗಲಕ್ಕೂ ಹರಡಲಾರಂಭಿಸಿತು.
ಆ ಕಡೇಲಿಂದ ಹಲಗೆ, ತಮ್ಮಟೆ, ಡೊಳ್ಳು, ರುಮ್ಮಿ, ಸೊನಾಯಿ, ಬಾಜಾಭಜಂತ್ರಿಗಳ ನಾದ ಪ್ರವಾಹದೊಡನೆ ಆಗಮಿಸಿದ್ದು ತಡ ಆಗಲಿಲ್ಲ. ಮನೆಮನೆಯಿಂದ ಮುತ್ತಯ್ದೇರು ಕಳಸ ಹಿಡಕೊಂಡು ಹೊರ ಬಿದ್ದದ್ದು ತಡ ಆಗಲಿಲ್ಲ. ಮೋಬಯ್ಯನ ಪಾದಗಳು ನೆಲ ಸೋಂಕದಂತೆ ಮಾಡಿ ಕರೆತರುವ ಸಲುವಾಗಿ ಅಯಿವತ್ತೊಂದು ಮಂದಿ ಮಡಿವಾಳರು ನೂರಾರು ಜರತಾರಿ, ಪೀತಾಂಬರಿ ಸೀರೆಗಳನ್ನು ತಮ ತಮ್ಮ ಹೆಗಲ ಮ್ಯಾಲ ಯಿಳಿಬಿಟ್ಟುಕೊಂಡು ಸಜ್ಜಾಗಿ ಬಂದದ್ದು ತಡ ಆಗಲಿಲ್ಲ. ಯೇಳೆಂಟು ವೂರುಗಳ ನೂರೆಂಟು ಜೋಗತೇರು ಚವುಡಿಕೆಗಳನ್ನು ಭಾರಿಸೂತ ವುಧೋ ವುಧೋ ಯಂದು ವುದ್ಗಾರ ತೆಗೆಯುತ್ತ ಬಂದದ್ದು ತಡ ಆಗಲಿಲ್ಲ.