ಮತ್ತೊಂದು ಬಾರಿ “ಹೋಯ್ ಸೂರಾ.. ಯಲ್ಲದೀ ಮಗ್ನೇ?” ಯಂದು ಕೂಗಿದಳು. ಆಕೆಯ ಆ ಕೂಗು ಯೇಟೊಂದು ಸಕ್ತಿವುತವಾಗಿ ಯಿತ್ತೆಂದರೆ ಸೂರ್ಯಪರಮಾತುಮನು ವಂಚಣ ಮಂಕಾದನು. ಯೀಕೆ ಹಿಂಗಾ ಕೂಗಿದರೆಲ್ಲಿ ಯವ್ವನ ಯಂಬ ಪದ ಮಾನವಾಗ್ತದೋ ಯಂದು ಸಬುಧ ಭಾವಿಸಿತದು. ಗಾಳಿಯ ತುಂಡೊಂದು ಆಕೆಯ ಕೂಗನ್ನು ಮುದ್ರೆಯುಂಗು ರೋಪಾದಿಯಲ್ಲಿ ತನ್ನಂಗಯ್ಯೊಳಗಿಟು ಕೊಂಡು ಸುಯ್ಯಂತ ಹೋಗಿ ಅನತಿ ದೂರದಲ್ಲಿ ಗೋಪಿಕಾ ಸ್ತ್ರೀಯಂಥ ಮಣಕಮೊಂದನ್ನು ತನ ಮುಂದ ತರುಬಿಟ್ಟುಕೊಂಡು ಸಿರಿಕ್ರುಷ್ಣ ಪರಮಾತಮನಂತೆ ರಾಸಲೀಲಾಯಿನೋದದಲ್ಲಿ ನಿರತನಾಗಿದ್ದ ಸೂರ ಮಾಶಯನ ಕರ್ಣ ಕುಂಡಲದೊಳಗುದುರಿಸಿತು. ಅದು ಮಸ್ತಕಕ್ಕೇರಿದೊಡನೆ ಜಂಘಾಬಲ ವುಡುಗಿದಂಗಾಗಿ ಆತಂಕಕ್ಕೀಡಾದ ಪ್ರಿಯತಮೆಗೆ “ಮಾತ್ರುಕರೆಯನ್ನು ಅಲಕ್ಷಿಸುವಂತಿಲ್ಲ.. ಪ್ರಿಯೆ.. ಹೋಗಿ ಯೇನೆಂದು ಕೇಳಿ ಅನುಮತಿ ಪಡೆದು ಬರುವೆನು.. ಅಲ್ಪಕಾಲದ ಯಿರಹವನ್ನು ಸಹಿಸಿಕೋ” ಯಂದು ಹೇಳಿ ಸಮಾಧಾನಪಡಿಸಿ ಶರವೇಗದಲ್ಲಿ ಕ್ರಮಿಸಿ ತನ್ನ ತೀರ್ಥರೂಪಳನ್ನು ಸೇರಿತು. ಅದನ್ನು ನೋಡಿದೊಡನೆ ಆಕೆಗಾದ ಸಂತೋಷ ಅಷ್ಟಿಷ್ಟಲ್ಲ. ಅದರ ಮೂತಿಗೆ ಹುಸಿಪೆಟ್ಟನ್ನು ಹಾಕುತ್ತ “ನನ್ ಬಿಟ್ಟು ಯಲ್ಲೋಗಿದ್ದೋ ನೀನು. ಯೇಟು ಬಾರಿ ಕೂಗಬೇಕೆಲೋ ನಿನ್ನ.. ಯೀಟೊತ್ ಯಾವಾಕೀನ ಅಡ್ಡಾಕೊಂಡಿದ್ದೆಲೋ.. ನಿಂಗೇನು ಹೇಳೋರು ಕೇಳೋರು ಯಾರೂ ಯಿಲ್ಲಂದ್ಕಂಡೀಯಾ ಹೆಂಗೆ?” ಯಂದು ವಂದೇ ವುಸುರಿಗೆ ತರಾಟೆ ತೆಗೆದುಕೊಂಡಳು. ಆವಾಗಿದ್ದು ಅದು ಆಕೆಯ ಮುಖಮೂತಿ ಮುಂಗಯ್ಯ ನೆಕ್ಕಾಡುತ ತನ್ನ ವಯ್ಕ ವಯ್ಕನೆ ಭಾಷೆಯಲ್ಲಿ ಯೆನೇನೋ ಸಬೂಬು ಹೇಳಿತು. ಅದು ಆಕೆಗೆ ಅರ್ಥವಾಗದೆಯಿರಲಿಲ್ಲ. “ಸರ್ರೆಕಣಪ್ಪಾ.. ನಾನಿನ್ನು ಕೂಳು ಕುಚ್ಚಿಡೋದಯ್ತಪ್ಪಾ.. ಮಸ್ತು ವದಕನ ಬದುಕನ ಅದಾವ ಮನ್ಯಾಗ.. ನಾನೋಯ್ತೀನಿ.. ನೀನ್ಯಾವಾಗಾರ ಬಂದುಕಾ” ಯಂದು ಹೇಳಲು ಅದು ವಯ್ಕ ವಯ್ಕನೆ ಹಾಡುತ ಠಣ ಠಣ್ಣ ಜಿಕ್ಕೋತ ಜಿಕ್ಕೋತ ಸಂತೋಷದಿಂದ ಮೋಡಿ ಹೋಯಿತು. ಯಿನ್ನೇನದು ಮರೆಯಾಗಲಿದೆ ಅಂಬುವಾಗ “ವುಷಾರಿ ಕಣ ಮಗಾ.. ಕಾಲ ಸುಮಾರ್ಯಾಗಯ್ತೆ” ಯಂದು ಮರೆತಿದ್ದ ಮಾತನ್ನು ಕೂಗಿ ಹೇಳದೆಯಿರಲಿಲ್ಲ ಜಗಲೂರೆವ್ವ....
ಸಮಾಧಾನದ ವುಸುರು ಬಿಟ್ಟು ಸುತ್ತನ್ನಾಕಡೆ ಕಣ್ಣಾಡಿಸಿ ಸುತ್ತಮುತ್ತ ನೋಟ ಮಾತ್ರದಿಂದ ಅಗೋಚರ ಬೇಲಿ ರಚನೆ ಮಾಡಿದಳು. ಮುದ್ಯೋನು ಮನೀಗೆ ಬಂದಾನೋ, ಯಿಲ್ಲಾ ಅರಮನ್ಯಾಗಯಿದಾನೋ? ವುಂಡ್ನೋ, ಯಿಲ್ಲಾ