ಮಾದೇವಾss
ಗುಡಿಹಿಂದಲ ಮೂಳೆ ಮೋಬಯ್ಯನ ಸರೀರದೊಳಗೆ ಸಾಂಬವಿ ವಸ್ತಿ ಮಾಡಿರುವಳೆಂಬ ವರ್ತಮಾನವನ್ನು ತನ್ನ ಮಯ್ಯ ಪದರೊಳಗೆ ತುಂಬಿಕೊಂಡು ಗಾಳಿ ಯಿತ್ತಲಿಂದ ಅತ್ತ ಸುಳುದಾಡುತ ಹೋತು, ಕಾಗೆ, ಗುಬ್ಬಿಯೇ ಮೊದಲಾದ ನಿರುಪದ್ರವಿ ಪಕ್ಷಿಗಳು ಆ ವರ್ತಮಾನದ ಮೂಟೆಯನ್ನು ತಮ ತಮ್ಮ ಹೆಗಲ ಮ್ಯಾಲ ಹೇರಿಕೊಂಡು ಯಿತ್ತಲಿಂದ ಅತ್ತ ಹಾರುತ್ತ ಹೋದವು. ಯೀ ಪರಮಾನ್ನ ಸದ್ರುಸ ಸುದ್ದಿಯನ್ನು ಮಂದಿ ತಮ ಬಾಯಿಯಿಂದ ಯಿನ್ನೊಬ್ಬರ ಕಿವಿಗೆ ಬಡಬಡಿಸತೊಡಿಗದರು. ಬಾಯಿ ಕಿವಿಗಳುಳ್ಳ ಮಂದಿ ಪಯ್ಕಿ ಕೆಲವರು ಮುಖ ಮಾರ್ಜುನ ಮಾಡಿಕೊಳ್ಳೋದ ಬಿಟ್ಟು, ಯಿಸರ್ಜನ ಕಾರ್ಯೇವುಗಳನ್ನು ಆರ್ದಂಬರ್ಧಕ್ಕೆ ಬಿಟ್ಟು ಕೂಸು ಕಂದಮ್ಮ ಗಳನ್ನು ತಮ್ಮ ತಮ್ಮ ಯದೆಗವುಚಿಕೊಂಡು, ಅಂಗಿ, ಪಂಚೆ, ಕುಬುಸಗಳಿಗೆ ಗುಂಡಿ ಹಾಕಿ ಕೊಳ್ಳುತ, ಚಲ್ಲಾಣಗಳಿಗೆ ಲಾಡಿ ಬಿಗಿದು ಸರಗಂಟು ಹಾಕುತ, ಬಾಯೊಳಗೆ ಬಾನದುಂಡೆಯನ್ನು ನಮಲೋದು ಮರೆಯುತ, ಕಯ್ಯ ತಿರುಮಾತ, ಕಾಲು ಬೀಸಿ ಬೀಸಿ ಹಾಕೂತ ಹಾಕೂತ ಥೆಳಗೇರಿಯ ಗುಡಿ ಹಿಂದಲ ಮನೆಗೆ ಯಡತಾಕಿ ಮನೆಮುಂದಲ ಪಳುಗಟ್ಟೆ ಮ್ಯಾಲ ಮಟ್ಟಸವಾಗಿ ಕೂಕಂಡಿದ್ದ ಮೋಬಯ್ಯನನ್ನು ಯಿಸುಮಯದಿಂದ ನೋಡಿ “ಹಾಯ್ ಸಿವನೇ ಸಿವಸಂಕರ ಮಾದೇವಾss” ಯಂದುದ್ಗಾರ ತೆಗೆಯೂತ ತಮ ತಮ್ಮ ಮನೆಗಳಿಗೆ ವಾಪಾಸಾಗ ಲಾರಂಬಿsಸಿದರು. ವಜ್ರಾಲ ಪೋಲಪ್ಪ, ಪುಂಗಿ ಪುಲ್ಲಪ್ಪ, ಮುತ್ತೇರಿ ಮಲ್ಲವ್ವ, ಬೋರಯ್ಯರೆ ಮೊದಲಾದ ಹಿರೀಕರು ಗುಡ್ಡದ ಹಿಂದು ಮುಂದುಲ ಗಂಡು ಕಲ್ಲುಗಳಂಗೆ ನೆರೆದು ಮೂಗಿನಿಂದಲೂ ಕಣ್ಣೀರು ಸುರಿಸುತಲಿದ್ದ ಜಗಲೂರೆವ್ವಗೆ ಪರಿಪರಿಯಿಂದ ಸಮಾಧಾನ ಹೇಳುತಲಿದ್ದರು. ಆಜುಡಲವ್ವ, ಗಾದೀರಮ್ಮ, ವುಲಿಗೆವ್ವ, ಯಲ್ಲಮ್ಮ, ಯಿಲ್ಲಮ್ಮ, ಅಲ್ಲೆಮ್ಮರೇ ಮೊದಲಾದ ನಿತ್ಯ ಸುಮಂಗಲೇರು ಅವ್ವನ ಸಾಲಂಕ್ರುತ ಹಡಲಿಗೆಯನ್ನು ತಮ ತಮ್ಮ ತಲೆ ಮ್ಯಾಲ ಹೊತ್ತು ಕೊಂಡಲ್ಲಿಗೆ ಬಂದು ಚವುಡಿಕೆಗಳನ್ನು ಮೀಟುತ್ತ “ಸಾಂಬವಿಯ ಮಗನಾದನೇ ನಮಮೋಬ ಜಗದಂಬೆ ಸಿಸುವಾದನೇ” ಯಂದು ಹಾಡೂತ ಪಾಡೂತ ಕುಣಿಯ ತೊಡಗಿದರು. ಥೆಳಗೇರ್ಯಾತಿ ಥೆಳಗೇರಿ ಕಡೇಲಿಂದ ಕಳವಳ, ತಡಸಲ, ಬಳುವಳ, ಕಡುವಲರೆಂಬ ಹೊಲೇರ ಪಡುವಲಯ್ಯನ ಮಕ್ಕಳು ಸುಯ್ಯಂತ ಬಂದು ತಮ ತಮ್ಮ ಹಲಗೆ ತಪ್ಪಡಿಗಳ ಮ್ಯಾಲ ಕೋಲಾಡಿಸಲಾರಂಬಿsಸಿದರು. ಮುದ್ದ, ಸುದ್ದ, ಗುದ್ದರೆಂಬ ಸಿದ್ದನ ಮಕ್ಕಳಲ್ಲಿಗೆ ಸುಯ್ಯಂತ ಬಂದು ‘ಕೂಯ್.. ಕುಕುಕೂಯ್ss’ ಯಂದು