ತಾನೂ ರೋಸಿ ಹೋಗಿದ್ದಳಂತೆ.. ಗುಬ್ಬಿ ಮ್ಯಾಲ ಬ್ರೆಮ್ಮಾಸ್ತರ ಬಿಡುವುದು ತಾಯಿಯಾದಾಕೆಗೆ ಸೋಭಿಸುವುದಿಲ್ಲವೆಂದು ವಾದಿಸುತ್ತಲೇ ಬಂದಿದ್ದವಳಂತೆ ತಾನು, ಅವ್ವಾ ತಾಯೀ ನಿನ್ನಂಗೆ ನಾನೂ ಮುನುಸಿಕೊಂಡರ ಯೀ ಭೂಮಿಮ್ಯಾಲ ಹಸುರೆಂಬುವ ಸಬುಧವೇ ಯಿರಾಕಿಲ್ಲ.. ಹಸಿರಿಲ್ಲದ ಭೂಮಿಯನ್ನು ವೂಹಿಸಿಕೊಂಡಲ್ಲಿ ಸಿವ.. ಸಿವ.. ಪರೋಕ್ಷವಾಗಿ ತನ್ನ ಬೆಂಬಲವೂಉಂಟು ಬೇಯಿನ ಮರದಮ್ಮದಿರಿಗೆ.. ತಿಳಿತಾ ಯಂದಾಕೆ ಅಂದೊಡನೆ ಸಾಂಬವಿಗೆ ನಡಗು ಹುಟ್ಟದೆಯಿರಲಿಲ್ಲವಂತೆ.. ಆಕೆಯ ನಡುಗಿಗೆ ವಸ್ತಿಯು ಅಳ್ಳಾಡಿತಂತೆ.. ಯಲ್ಲಿ ತನ್ನ ನೆಚ್ಚಿನ ತಂಗಿಯಾದ ಸಾಲುಮರದವ್ವ ತನ್ನನ್ನು ಬಿರುಬಿಸಿಲಿಗೆ ತಳ್ಳಿಬಿಡುವಳೋ, ಮುಂದ ಸಾಂಬವಿಯು ಸಾಲಮರದವ್ವಳೊಂದಿಗೆ ಮಾಡಿಕೊಂಡ ವಪ್ಪಂದ ಯಾವ ರೀತಿಯದು? ಸಾಲು ಮರದವ್ವ ಬೇಯಿನ ಮರದಮ್ಮದಿರಿಗೆ ಆಡಿರಬೌದಾದ ಕಿವಿಮಾತು ಯಂಥಾದ್ದು? ಅಂತೂ ಅಲವುಕಿಕಗಳ ನಡುವಿನ ತಂಟೆ ತಕರಾರು ಸುಖಾಂತಗೊಂಡಿತೆಂಬಲ್ಲಿಗೆ ಅಂತೆ ಕಂತೆಗಳು ಸಿವಸಂಕರ ಮಾದೇವಾs
ಆ ಕಾರಣದಿಂದ ಆ ಛಣದವರೆಗೆ ಭೂಮಿ ಮ್ಯಾಲೆ ವಣಕ್ಕೊಂಡು ತೇಜೋಹೀನವಾಗಿದ್ದ ಸಮಸ್ತ ಬೇಯಿನ ಮರಗಳೊಳಗ ರಸವಾಡಿತಂತೆ.. ಚಕಚಕಾಂತ ಚಿಗುರು ಮುಡುದು ಕಂಗೊಳಿಸಲು ಆರಂಬಿsಸಿದವಂತೆ ಯಂಬಲ್ಲಿಗೆ.. ಯವ್ವಾss ಅಂತೂ ಯಿಂತೂ ನಿನ್ನ ಮುನುಸು ಪರಿ ಸಮಾಪ್ತಿ ಆಯಿತಲ್ಲಾ ತಾಯೀ.. ಮುಂದ್ಯಾವತ್ತೂ ನಮ್ಮ ಕಡೇಕ ಯಡಗಣ್ಣಿಂದ ನೋಡಬ್ಯಾಡ ತಾಯೀ ಯಂದು ಪ್ರತಿ ಚಿಗುರು ಸಣು ಮಾಡುತ ಅರಕೆ ಮಾಡಿಕೊಂಡವಂತೆ ಯಂಬಲ್ಲಿಗೆ.. ಯಿನ್ನುಳಿಕೇ ತರುಲತೆಗಳಿಂದ ಅಭಿನಂದನೆಗಳ ಮಾಪುರವೇ ಹರಕೋತ ಬಂದು ಅವುಗಳ ಮಡಿಲು ತುಂಬಿ ತುಳುಕಾಡಿತಂತೆ ಯಂಬಲ್ಲಿಗೆ.. ತಾಯಿಯ ಹಾಸಿಗೆ ಆಗತೇವಿ.. ತಾಯಿಯ ಮಯ್ಕಾಂತಿಗೆ ಕಾರಕರಾಗುತೇವಿ.. ಆಕೆಯ ಸನೀಕ, ಆಕೆಯನ್ನು ನಂಬಿಕೊಂಡವರ ಸನೀಕ ರೋಗರುಜಿಣಗಳ ಸುಳಿಯದಾಂಗ ನೋಡ್ಕೋತೀವಿ ಯಂದು ಬಲು ಸಂಭರಮಪಟ್ಟವಂತೆ ಯಂಬಲ್ಲಿಗೆ.. ಹರಕೊಂಡವರ ತೆಕ್ಕೆ ತುಂಬಿದವು ಯಂಬಲ್ಲಿಗೆ.. ವೂರ ಮಂದಿಯ ಬೊಗಸೆ ತುಂಬಿದವು ಯಂಬಲ್ಲಿಗೆ.. ಭಕುತಾದಿ ಮಂದಿಯು ಬೇಯಿನ ಮರದಮ್ಮದಿರ ಅಂತಃಕರಣವನ್ನು ಮನಸೋಯಿಚ್ಚೆ ಕೊಂಡಾಡಿದರು ಯಂಬಲ್ಲಿಗೆ..