ಕಾರಣವಾಗಿತ್ತು.. ಭೂತ ಅಂದರ ಯೇನು? ಬಿಲ್ಲೆ ಅಂದರ ಯೇನು? ಆ ಯರಡು ಸಬುಧಗಳ ನಡುವಿನ ನಂಟಸ್ತನ, ತೆಗಸ್ತನ ಯಂಥಾದ್ದು ಯಂದು ಮುಂತಾಗಿ ತಮಗ ತಾವ ಮಾತನಾಡಿಕೊಳ್ಳಲಕ ಹತ್ತಿದ್ದೇ ಆ ಯಿಳಂಬಕ ಕಾರಣವಾಗಿತ್ತು.. ಆ ಸಬುಧ ಸಮುಚ್ಚವನ್ನು ಅಂದರ ನಾಲಗೆಗೆ ಯೇನಾತದೋ? ಕೇಳಿದರ ಯೇನಾತದೋ? ಯಂಬ ಅಂಜಿಕೆಯು ಪ್ರತಿಯೊಬ್ಬರೊಳಗ ಮೂಡಿದ್ದೇ ಆ ಯಿಳಂಬಕ ಕಾರಣವಾಗಿತ್ತು.. ಆ ಸಬುಧವೇ ಯೀಟೊಂದು ಭಯಂಕರಯಿರಬೇಕಾದರ.. ಆ ಸಬುಧವನ್ನು ತನ್ನ ನಾಮದ ಯಡಕ ಮುಡುಕೊಂಡಿರುವ ಅವಯ್ಯನು ಹೆಂಗಿರಬ್ಯಾಡ ಯಂಬ ಭಾವನೆ ಮೂಡಿದ್ದೇ ಆ ಯಿಳಂಬಕ್ಕೆ ಕಾರಣವಾಗಿತ್ತು....
ಆದರೆ ಆ ಸಬುಧ ಕಿವಿವಳಗ ವುದುರದಂಗ ಯಿದ್ದೀತಾ? ನಾಲಗೆ ಮ್ಯಾಲ ವುರುಳಾಡದಂಗ ಯಿದ್ದೀತಾ? ವೂರಿಗೆ ಬಂದಿರೋದು ನೀರಿಗೆ ಬಾರದಂಗ ಯಿದ್ದೀತಾ?.. ದ್ಯಾಮಯ್ಯನನ್ನು ಸನೀಕದಿಂದ ನೋಡಿದವರಿಗೂ, ದೂರದಿಂದ ನೋಡಿದವರಿಗೂ ನಡುವೆ ನಾಲಗೆ ಜಗ್ಗಾಟಗಳು ನಡೆದವು.. ವಬ್ಬರು ಅವಯ್ಯನ ಯತ್ತರ ಯಂಟು ಮೊಳ ಅಂದರ, ಯಿನ್ನೊಬ್ಬರು ಮೂರುವರೆ ಮೊಳ ಯಂದು ವಾದಿಸಿದರು. ಕಣ್ಣಾರೆ ನೋಡಿದ ಮಂದಿ ತಮಗ ಗೋಚರವಾಗಿದ್ದೊಂದಿದ್ದರೆ ಯಿನ್ನೊಂದ ನಮೂನಿ ಕಲ್ಪನ ಮಾಡಿಕೊಳ್ಳುತಲಿದ್ದರು.. ಅವಯ್ಯ ನೋಡಲಕ ಮಾಮೂಲು ನರ್ರಮಾನ್ನವನಂಗೇನೋ ಅದಾನ.. ಆದರಾತ ಮನಸ್ಸು ಮಾಡಿದರ ಯಿಪ್ಪತ್ತೊಂದು ಮೊಳದುದ್ದಕ ಬೆಳೆದುಬಿಡಬಲ್ಲ.. ಅವಯ್ಯ ಸಮಯ ಬಿದ್ದಲ್ಲಿ ತನ್ನ ಮಾಮೂಲು ಬಾಯನ್ನೆ ಫರಲಾಂಗ ಅಗಲಕ ತೆರೆತಾನ.. ಕಯ್ಯಿಲ್ಲದ ಮಾಡಬಲ್ಲ.. ಕಾಲಿಲ್ಲದ ನಡೆದಾಡಬಲ್ಲ.. ಕಿವಿಯಿಲ್ಲದ ಕೇಳಬಲ್ಲ.. ಗಾಳಿ ಹಂಗ ಚಲಿಸಬಲ್ಲ.. ಹಿಂಗ ಮಂದಿಯಂಭೋ ಮಂದಿ ತಲಾ ವಂದೊಂದು ಮಾತನಾಡಿಕೊಳ್ಳುತಲಿದ್ದ ಕಾರಣಕ್ಕ ಯಿಳಂಬವಾಗಿತ್ತು....
ವಬ್ಬೊಬ್ಬರದು ವಂದೊಂದು ನಮೂನಿ ಅಭಿಪ್ರಾಯವಾಗಿತ್ತು. ಪ್ರತಿಯೊಂದು ಆಡಪಿಲ್ಲ.. ಮಗಪಿಲ್ಲ ಮನಸೊಳಗ ಭೂತಬಿಲ್ಲೆಯಂಬ ಅಮೂರ್ತವು ಅಗಾಧ ರೀತಿಯಲ್ಲಿ ಬೆಳೆಯತೊಡಗಿತ್ತು. ಅದು ಅರಮನೆ ಮಂದಿಗೂ ಹೊಸತೇ ಹೊಚ್ಚ ಹೊಸತಾಗಿತ್ತು.. ಅತ್ತ ಅರಮನೆಯೊಳಗ ರಾಜಮಾತೆ ಭಯ್ರಮಾಂಬೆ ಯಿನಹ ವುಳಿಕೇ ರಾಜಪರಿವಾರದ ಮಂದಿ ಕುತೂಹಲದಿಂದ ತತ್ತರಿಸತೊಡಗಿದ್ದರು. ಪುರುವಿಕಳೂ ಹಿರೀಕಳೂ ಆದ ಭಯ್ರಮ್ಮವ್ವ ಪುವ್ವುಲ ರಾಜವಮುಸಸ್ಥರಾದವರು ಕುತೂಹಲಿಸುವು ದೆಂದರೇನು? ಭಯಪಡುವುದೆಂದರೇನು? ಯೀ ರೀತಿ ವರ್ತನ ಅರಮನೆಗೆ ಅಪಮಾನ.. ಅವನೂ