ಸೋಪ್ತಿ ಆಗಿರೋ ಕಟುಗರ ಬಗ್ಗೆ ಆಳೋ ಅರಸರಿಗೆ ವಂಚೂರಾರ ಕರುಣೆವುಂಟಾ? ಪಟ್ಲಿಗಳ ಕುತ್ತಿಗಿಗೆ ಬಾಯನ್ನ ಹಚ್ಚಿ ಹಸಿರಗುತ ಕುಡಿಯೋ ಪೋತರಾಜರು ಅಂಡಾವರನ ಪುಂಡೀಪಲ್ಯೆ ಆಗ್ಯಾರಲ್ಲಾ.. ಅವರ ಬಗೆಗೇನಾರ ಪಟ್ಟಣ ಸೋಮಿಗಳಿಗೆ ಕನುಕರವುಂಟಾ? ಖಂಡಖಂಡುಗ ಬೆಳಿಯೋ ಭೂಮ್ತಾಯಿ ಅರವೆ, ಯರಡರವೆಗೆ ಸೋಪ್ತಿ ಆಗವಳಲ್ಲಾ, ಆಕೆ ಬಗೆಗೇನಾರ ಸರಕಾರಕ್ಕೆ ದರಕಾರವುಂಟಾ? ಧೋ ಅಂತ ಮಳಿ ಸುರಿದಿರುವುದುಂಟಾ? ಹೊಳೆ ಹಳ್ಳಗಳು ಅರಚಿರುವುದುಂಟಾ?
‘ತಾಯೀ.. ಸಾಂಬವೀ.. ಹಂಪಜ್ಜನ ಬಾಯೊಳಗ ನಾಕಾರು ಸಬುದಗಳ ರೂಪ ಧರಿಸಿ ವಡ ಮೂಡು ಜಗದಂಬೆ’ ಅವ್ವನ ವಕ್ಕಲು ಮಂದಿ ಜಾವ ಜಾವಕ್ಕ ಬಾಯಿ ತೆರೆಯೋದು, ಮುಚ್ಚೋದು ಮಾಡುತಲಿದ್ದರು....
ಅಲ್ಲೇ ಯಿನ್ನೊಂದು ಸೊಲುಪ ದೂರದ ಫಾಸಲೆಯಲ್ಲಿ ದೇವಿ ಪುರಾಣವನ್ನು ವುಸುರಾಡುತ ಬೆಳೆದಂಥವನಾದ ದಾಸರಯ್ಯನು ತನ್ನತ್ತ ಕಿವಿ ಚಾಚಿದ್ದ ಮಂದಿಯನ್ನುದ್ದೇಶಿಸಿ ‘ಸತ್ಯಯುಗದಲ್ಲಿ ಗವುರಿಯ ಅದೇ ಯಿನ್ನು ಚಂಡನನ್ನು ಚೆಂಡಾಡಿ ಚಂಡಿಯಂಬ, ಮುಂಡನನ್ನು ಚೆಂಡಾಡಿ ಚಾಮುಂಡಿ ಯಂಬಬಿsದಾನವ ಧಾರಣ ಮಾಡಿದ್ದಳು.. ಆಗ ಶಾಕಿನಿ ಡಾಕಿಣಿಯರು, ಸುಂಬ ನಿಸುಂಬರ ಬಾಡೂಟದ ಸಲುವಾಗಿ ಆಕೆಯನ್ನು ಬೆಂಬಲಿಸಿದ್ದರು.. ಅವರನ್ನು ಸಮ್ಮಾರ ಮಾಡಿ ಸಾಂಬವಿ ಯಂಬಬಿsದಾನ ಮುಡುದು ಲೋಕ ಯಿಖ್ಯಾತಳಾಗು ತಾಯೇ ಯಂದವರು ಪರಿಪರಿಯಿಂದ ಕಾಡತೊಡಗಿದರು.. ಸುಂಬನ ಸೇನಾದಿsಪತಿ ರಕುತಬೀಜಾಸುರನನ್ನು ಸಮ್ಮರಿಸಲೋಸುಗ ತಾಯಿಯು ಪತಿಪರಮೇಸುರನ ಅಪ್ಪಣೆಯಂತೆ ಮಾಂಕಾಳಿಯ ರೂಪ ತಾಳಿದವಳಾಗಿ, ಅಖಂಡ ಹಲಗೆ, ಮಾರಾಂಕ ಖಡುಗ ಧರಿಸಿದವಳಾಗಿ, ತ್ರಿಸೂಲ, ಸಂಖು, ಡಮುರುಗಗಳನ್ನು ಧಾರಣ ಮಾಡಿದವಳಾಗಿ, ಬಿಚ್ಚುಗತ್ತಿ, ಬಿದಿರಗತ್ತಿ, ಚಂದ್ರಬಾಣ, ಸೂರ್ಯಬಾಣ, ಅಗ್ನಿಬಾಣ, ಕಠಾರಿss ಯಿವೇ ಮೊದಲಾದss.. ಯಂದು ಪ್ರವಚನ ಮಾಡುತ್ತಿರುವುದ ರೊಳಗss....
ಮಂದಿ ವಸ್ತಿ ಸನೀಕಕ ಹೋಗುವುದು, ಬರುವುದು ಮಾಡುತಲಿತ್ತು, ಮಾಬಲಿಯ ಕಣಸು ಕಾಂಬುತಲಿತ್ತು. ತಮ ತಮ್ಮ ಸರೀರದಂಗಾಂಗಗಳನು ಮುಟು ಮುಟ್ಟಿ ನೋಡಿಕೊಳ್ಳುತಲಿತ್ತು.. ಮನದಾಗ ವಟವಟ ಅಂದನಕಂತಲೇಯಿತ್ತು.. ಸದರಿ ಪಟ್ಟಣದೊಳಗ ಮಾಬಲಿ ಯಾರದ್ದಾಗಿರಬೌದು?